ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಆರೋಪ: ತ್ವರಿತ ತನಿಖೆಗೆ ಆಗ್ರಹ

Update: 2019-04-21 15:37 GMT

ಹೊಸದಿಲ್ಲಿ, ಎ.21: ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತ್ವರಿತವಾಗಿ ವಿಚಾರಣೆ ನಡೆಯಬೇಕು ಹಾಗೂ ವಿಚಾರಣಾ ಪ್ರಕ್ರಿಯೆ ಅಂತ್ಯಗೊಳ್ಳುವವರೆಗೆ ಸಿಜೆಐ ಅವರು ಕಾರ್ಯ ಮುಂದುವರಿಸಬಾರದು ಎಂದು ‘ದಿ ವುಮೆನ್ ಇನ್ ಕ್ರಿಮಿನಲ್ ಲಾ ಅಸೋಸಿಯೇಷನ್’ ಆಗ್ರಹಿಸಿದೆ.

ವಿಚಾರಣೆ ನಿಷ್ಪಕ್ಷಪಾತ ಹಾಗೂ ಕ್ರಮಬದ್ಧವಾಗಿ ನಡೆಯಬೇಕು. ದೂರನ್ನು ಕಾರ್ಯವಿಧಾನದಂತೆಯೇ ಪರಿಗಣಿಸಬೇಕು ಮತ್ತು ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಮೂಲಭೂತ ಹಕ್ಕನ್ನು ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ಸಂಘವು ಆಗ್ರಹಿಸಿದೆ.

ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಿಗೆ ಅನ್ವಯವಾಗುವ ರೀತಿ ರಿವಾಜಿನಂತೆ ವಿಚಾರಣೆ ನಡೆಯಬೇಕು ಮತ್ತು ‘ಪೋಶ್ ಕಾಯ್ದೆ’ (ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾಯ್ದೆ)ಗೆ ಅನುಗುಣವಾಗಿರಬೇಕು ಎಂದು ಒತ್ತಾಯಿಸಿದೆ. ಪ್ರತಿವಾದಿಗೆ ನೀಡಿದಷ್ಟೇ ಅವಕಾಶವನ್ನು ದೂರುದಾರರಿಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ನೀಡಬೇಕು ಎಂದಿರುವ ‘ದಿ ವುಮೆನ್ ಇನ್ ಕ್ರಿಮಿನಲ್ ಲಾ ಅಸೋಸಿಯೇಷನ್’, ಅಧಿಕಾರ ಮತ್ತು ಅಂತಸ್ತಿನಲ್ಲಿ ಇರುವ ಅಪಾರ ಅಸಮಾನತೆಯ ಕಾರಣ ಮಾನ್ಯ ಸಿಐಜೆ ವಿಚಾರಣೆ ಪ್ರಕ್ರಿಯೆ ಮುಗಿಯುವವರೆಗೆ ಕರ್ತವ್ಯ ನಿರ್ವಹಿಸಬಾರದು ಎಂದು ಒತ್ತಾಯಿಸಿದೆ.

ಸುಪ್ರೀಂಕೋರ್ಟ್‌ನ ಘನತೆಯನ್ನು ಸಂರಕ್ಷಿತವಾಗಿಡುವ ರೀತಿಯಲ್ಲಿ ವಿಚಾರಣೆಯು ಸಂದೇಹಕ್ಕೆ ಆಸ್ಪದ ನೀಡದ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಯಬೇಕು. ತನಿಖಾ ಪ್ರಕ್ರಿಯೆಯ ಸಂದರ್ಭದಲ್ಲಿ ದೂರುದಾರರ ವಿರುದ್ಧ ದಬ್ಬಾಳಿಕೆ ನಡೆಸುವುದು, ಆನ್‌ಲೈನ್ ಮೂಲಕ ಪೀಡಿಸುವುದು ಮುಂತಾದ ಕ್ರಮಗಳಿಂದ ದೂರುದಾರರನ್ನು ರಕ್ಷಿಸಬೇಕು ಎಂದು ಸಂಘವು ತಿಳಿಸಿದೆ. ಶನಿವಾರ ನಡೆದ ನ್ಯಾಯಾಲಯದ ಕಲಾಪದಲ್ಲಿ ಹಾಜರಿದ್ದ ನ್ಯಾಯಾಧೀಶರು, ನ್ಯಾಯಾಲಯದ ಪ್ರಧಾನ ಕಾರ್ಯದರ್ಶಿ, ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ವಿಚಾರಣೆ ಪ್ರಕ್ರಿಯೆಯಲ್ಲಿ ಸೇರಿರಬಾರದು. ಆಯಾ ದಿನದ ವಿಚಾರಣೆಯ ನಡಾವಳಿ ಮತ್ತು ಆದೇಶವನ್ನು ದಾಖಲು ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News