ಸಿಜೆಐ ಗೊಗೊಯಿ ಅವರನ್ನು ಸಿಲುಕಿಸಲು ನನಗೆ 1.5 ಕೋ.ರೂ. ಆಮಿಷ ಒಡ್ಡಲಾಗಿತ್ತು: ವಕೀಲನ‌ ಆರೋಪ

Update: 2019-04-21 18:08 GMT
ರಂಜನ ಗೊಗೊಯಿ

ಹೊಸದಿಲ್ಲಿ, ಎ.21: ಭಾರತದ ಮುಖ್ಯ ನ್ಯಾಯಾಧೀಶ ರಂಜನ ಗೊಗೊಯಿ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಕುರಿತು ಸರ್ವೋಚ್ಚ ನ್ಯಾಯಾಲಯದ ವಕೀಲ ಉತ್ಸವ್ ಬೈನ್ಸ್ ಅವರು ದಿಗ್ಭ್ರಮೆಗೊಳಿಸುವ ಅಂಶವೊಂದನ್ನು ಬಯಲುಗೊಳಿಸಿದ್ದಾರೆ ಎಂದು theprint.in ವರದಿ ಮಾಡಿದೆ.

ಸಿಜೆಐ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಸುದ್ದಿಗೋಷ್ಠಿಯೊಂದನ್ನು ವ್ಯವಸ್ಥೆ ಮಾಡುವಂತೆ ಮತ್ತು ಗೊಗೊಯಿ ವಿರುದ್ಧ ಆರೋಪಗಳನ್ನು ಮಾಡಿರುವ ಸರ್ವೋಚ್ಚ ನ್ಯಾಯಾಲಯದ ಮಾಜಿ ಮಹಿಳಾ ಉದ್ಯೋಗಿಯನ್ನು ಪ್ರತಿನಿಧಿಸುವಂತೆ ಕೋರಿ ಅಪರಿಚಿತ ವ್ಯಕ್ತಿಯೋರ್ವ ತನ್ನನ್ನು ಸಂಪರ್ಕಿಸಿದ್ದ ಮತ್ತು ಇದಕ್ಕಾಗಿ ತನಗೆ 1.5 ಕೋ.ರೂ.ಗಳನ್ನು ನೀಡುವ ಆಮಿಷವನ್ನೊಡ್ಡಿದ್ದ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

ರವಿವಾರ ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬೈನ್ಸ್,ಇದು ಗೊಗೊಯಿ ಅವರು ರಾಜೀನಾಮೆ ನೀಡಬೇಕೆಂದು ಬಯಸಿರುವ ಕೆಲವು ಜನರ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು. ತನ್ನ ಅನುಭವವನ್ನು ವಿವರಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿದಾವತ್ತು ಸಲ್ಲಿಸುವುದಾಗಿ ಹೇಳಿದ ಅವರು,ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವವರನ್ನು ತಾನು ಅದರಲ್ಲಿ ಹೆಸರಿಸಲಿದ್ದೇನೆ ಎಂದು ತಿಳಿಸಿದರು.

ಬೇನ್ಸ್ ಅವರು ಶನಿವಾರ ಗೊಗೊಯಿ ವಿರುದ್ಧ ಮಹಿಳಾ ಉದ್ಯೋಗಿಯು ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿರುವುದು ಬಹಿರಂಗಗೊಂಡ ಬಳಿಕ ಫೇಸ್‌ಬುಕ್‌ನಲ್ಲಿ ತನಗೆ 1.5 ಕೋ.ರೂ.ಆಮಿಷ ಒಡ್ಡಿದ್ದ ವಿಷಯವನ್ನು ಪೋಸ್ಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News