ವಿಪತ್ತು ನಿರ್ವಹಣೆ:ಉಡುಪಿ -ದ.ಕ. ಜಿಲ್ಲೆಗಳಿಗೆ ಎನ್‌ಡಿಆರ್‌ಎಫ್ ತಂಡ

Update: 2019-04-22 16:17 GMT

ಉಡುಪಿ, ಎ.22: ಮುಂಬರುವ ಮಳೆಗಾಲದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯಾವುದೇ ರೀತಿಯ ಅತಿವೃಷ್ಟಿ ಮತ್ತು ಪ್ರಾಕೃತಿಕ ವಿಕೋಪವನ್ನು ಸಮರ್ಪಕವಾಗಿ ನಿರ್ವಹಿಸುವ ದೃಷ್ಟಿಯಿಂದ ರಾಷ್ಟ್ರೀಯ ವಿಪತ್ತು ಪರಿಹಾರ ತಂಡದ (ಎನ್‌ಡಿಆರ್‌ಎಫ್) ಒಂದು ಬೆಟಾಲಿಯನ್ ಮೇ ತಿಂಗಳ ಅಂತ್ಯಕ್ಕೆ ಇಲ್ಲಿಗೆ ಆಗಮಿಸಲಿದೆ ಎಂದು ರಾಜ್ಯ ಸರಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ರಾಜ್‌ಕುಮಾರ್ ಖತ್ರಿ ತಿಳಿಸಿದ್ದಾರೆ.

ಸೋಮವಾರ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳ ವಿಪತ್ತು ನಿರ್ವಹಣೆ ಕಾರ್ಯಕ್ರಮಗಳ ಮತ್ತು ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಕುರಿತ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಎನ್‌ಡಿಆರ್‌ಎಫ್‌ನ ದಕ್ಷಿಣ ವಲಯ ಕಚೇರಿ ಆಂಧ್ರಪ್ರದೇಶದ ಗುಂಟೂರಿ ನಲ್ಲಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ತಂಡವು ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಕ್ಷಿಪ್ರವಾಗಿ ತಲುಪಲು ವಿಳಂಬವಾಗುತ್ತದೆ. ಕಳೆದ ವರ್ಷ ಉಭಯ ಜಿಲ್ಲೆಗಳಲ್ಲಿ ತೀವ್ರ ಅತಿವೃಷ್ಟಿ ಸಂಭವಿಸಿರುವ ಹಿನ್ನೆಲೆ ಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಗಳಲ್ಲಿ ನೆರವಾಗಲು ಎನ್‌ಡಿಆರ್‌ಎಫ್‌ನ ಒಂದು ತಂಡವನ್ನು ನಿಯೋಜಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.

ಎರಡೂ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಎನ್‌ಡಿಆರ್‌ಎಫ್ ತಂಡವನ್ನು ಸುರತ್ಕಲ್‌ನಲ್ಲಿ ಮೊಕ್ಕಾಂ ಇಡಲಾಗುವುದು ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ಯೋಜನೆಗಳ ವಿವರ ನೀಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಯ ಯೋಜನಾ ನಿರ್ದೇಶಕ ರಾಜ್‌ಕುಮಾರ್ ಪೂಜಾರಿ, ವಿಪತ್ತುಗಳ ತುರ್ತು ಸಂದರ್ಭಗಳಿಗೆ ಬಳಕೆ ಯಾಗಲು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಒಂಭತ್ತುಕೆರೆ ಎಂಬಲ್ಲಿ ಸುಮಾರು 270 ಲಕ್ಷ ವೆಚ್ಚದಲ್ಲಿ ವಿವಿದೋದ್ದೇಶ ವಿಪತ್ತು ತಂಗುದಾಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದು ಶಾಲಾ ಕಟ್ಟಡವಾಗಿದ್ದು, ತುರ್ತು ಸಂದರ್ಭಗಳಿಗೆ, ವಿಪತ್ತು ಕಾರ್ಯಗಳಿಗೆ ಬಳಸಲಾಗುವುದು ಎಂದರು.

ಜಿಲ್ಲೆಯಲ್ಲಿ ಹೊಸದಾಗಿ 4 ತಾಲೂಕುಗಳು ಸ್ಥಾಪನೆಯಾಗಿದ್ದು, ಇಲ್ಲಿ ಆಡಳಿತ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ ಎಂದರು. ಇದಕ್ಕೆ ಸ್ಪಂದಿಸಿದ ಡಾ. ರಾಜ್‌ಕುಮಾರ್ ಖತ್ರಿ, ನೂತನ ತಾಲೂಕುಗಳಿಗೆ ಮೂಲಸೌಕರ್ಯ ವ್ಯವಸ್ಥೆ ಗಳನ್ನು ಒದಗಿಸಲು ಕೂಡಲೇ ಮಂಜೂರಾತಿ ನೀಡಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಉಡುಪಿ, ದ.ಕ ಮತ್ತು ಉತ್ತರಕನ್ನಡ ಜಿಲ್ಲೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News