ಎ. 28: ಬಲ್ನಾಡು ಉಳ್ಳಾಲ್ತಿ-ದಂಡನಾಯಕ ನೇಮೋತ್ಸವ

Update: 2019-04-23 12:04 GMT

ಪುತ್ತೂರು: ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಬಲ್ನಾಡು ದಂಡನಾಯಕ ಮತ್ತು ಉಳ್ಳಾಲ್ತಿ ದೈವಗಳ ವರ್ಷಾವಧಿ ನೇಮೋತ್ಸವ ಎ.28ರಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಚಿದಾನಂದ ಬೈಲಾಡಿ ತಿಳಿಸಿದ್ದಾರೆ.

ಅವರು ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಳದ ಜತೆ ಅವಿನಾಭಾವ ಸಂಬಂಧ ಹೊಂದಿರುವ ಬಲ್ನಾಡು ಉಳ್ಳಾಲ್ತಿ ಮತ್ತು ದಂಡನಾಯಕ ದೈವಗಳ ನೇಮೋತ್ಸವಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಳದ ಜಾತ್ರೆ ಸಂಪನ್ನಗೊಂಡು ಧ್ವಜಾ ಆವರೋಹಣ ನಡೆಯುವ ಮಾರನೇ ದಿನ ಗೊನೆ ಮುಹೂರ್ತ ನಡೆಸಲಾಗುತ್ತದೆ.

ಎ.26ರಂದು ದೈವಗಳ ಪಾತ್ರಿಗಳಿಗೆ ಎಣ್ಣೆಬೂಳ್ಯ ಕೊಡುವ ಕಾರ್ಯ ನಡೆಯಲಿದೆ. ಎ.27ರಂದು ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ರಂಗಪೂಜೆ ನಡೆಯಲಿದೆ. ಅದೇ ದಿನ ರಾತ್ರಿ ದೈವಗಳ ಭಂಡಾರ ತೆಗೆದು ತಂಬಿಲ ಸೇವೆ ನಡೆಸಲಾಗುವುದು. ಆನಂತರ ಅನ್ನಸಂತರ್ಪಣೆ ನಡೆಯಲಿದೆ.

ಎ.28ರಂದು ಮುಂಜಾನೆ 6.30ಕ್ಕೆ ದಂಡನಾಯಕ ವಾಲಸರಿ ನೇಮ, 10 ಗಂಟೆಗೆ ಉಳ್ಳಾಲ್ತಿ ದೈವದ ನೇಮ ನಡಾವಳಿ, ಅಪರಾಹ್ನ 2.30ಕ್ಕೆ ಕಾಳರಾಹು ಮತ್ತು ಮಲರಾಯ ದೈವಗಳ ನೇಮೋತ್ಸವ ನಡೆಯಲಿದ್ದು, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುವುದು ಎಂದು ತಿಳಿಸಿದರು.

ಕಳೆದ 3 ವರ್ಷಗಳಿಂದ ಬಿ.ತಿಮ್ಮಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ರೂ.10 ಲಕ್ಷ ವೆಚ್ಚದ ರಜತ ಕವಚ ಸಹಿತ ನೂತನ ಪಲ್ಲಕಿ, ರಾಜ್ಯ ಧಾರ್ಮಿಕ ಪರಿಷತ್ತಿನ ಅನುದಾನದೊಂದಿಗೆ ರೂ.20ಲಕ್ಷ ವೆಚ್ಚದ ಅನ್ನಛತ್ರ ನಿರ್ಮಾಣ, ಉಳ್ಳಾಲ್ತಿ ದೈವದ ಬೆಳ್ಳಿ ಛತ್ರಿಗೆ ಚಿನ್ನದ ಕವಚ, ಉಳ್ಳಾಲ್ತಿ ಪಾತ್ರಿಗೆ ಚಿನ್ನದ ಗುಂಡುಸರ, ದಂಡನಾಯಕ ಪಾತ್ರಿಗೆ ಚಿನ್ನದ ಗೋಧಿಸರ, ಭಟ್ಟಿ ವಿನಾಯಕ ದೇವಳದ ಬಡಗು ಭಾಗ ಮತ್ತು ದೈವಸ್ಥಾನದ ಹೊರಾಂಗಣಕ್ಕೆ ಇಂಟರ್‍ಲಾಕ್ ವ್ಯವಸ್ಥೆ, ಭದ್ರತಾ ಕೊಠಡಿ, ಸಿಸಿ ಕ್ಯಾಮರಾ ಅಳವಡಿಕೆ, ದೈವಸ್ಥಾನ ರಸ್ತೆ ಡಾಮರೀಕರಣ, ಕಾಂಕ್ರೀಟಿಕರಣ, ದೈವಸ್ಥಾನಕ್ಕೆ ಆವರಣಗೋಡೆ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಭಕ್ತರ ಸಹಾಯದೊಂದಿಗೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಟೆರಿಕಾಟನ್ ಬೇಡ, ಕಾಟನ್ ಸೀರೆ ಸಮರ್ಪಿಸಿ: ಮನವಿ

ಬಲ್ನಾಡು ಉಳ್ಳಾಲ್ತಿ ದೈವಕ್ಕೆ ಭಕ್ತಾದಿಗಳು ಹರಕೆ ರೂಪದಲ್ಲಿ ಸೀರೆ ಅರ್ಪಿಸುವ ಕ್ರಮ ತಲತಲಾಂತರದಿಂದ ನಡೆದುಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಟೆರಿಕಾಟನ್ ಸೀರೆಗಳನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಿರುವುದು ಕಂಡುಬರುತ್ತಿದೆ. ಈ ಸೀರೆಗಳ ಸದುಪಯೋಗದ ಹಿನ್ನಲೆಯಲ್ಲಿ ಭಕ್ತಾಧಿಗಳು ತಮ್ಮ ಹರಕೆ ಪ್ರಯುಕ್ತ ಕಾಟನ್ ಸೀರೆಗಳನ್ನು ಮಾತ್ರ ಉಳ್ಳಾಲ್ತಿ ದೈವಕ್ಕೆ ಅರ್ಪಿಸುವಂತೆ  ಆಡಳಿತ ಸಮಿತಿ ಅಧ್ಯಕ್ಷ ಬಿ.ತಿಮ್ಮಪ್ಪ ಗೌಡ ಭಕ್ತಾಧಿಗಳಿಗೆ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ತಿಮ್ಮಪ್ಪ ಗೌಡ, ಸದಸ್ಯರಾದ ಅಜಯ್ ಅಳ್ವ, ಆನಂದ ಸುವರ್ಣ, ಪ್ರಮೀಳಾ ಚಂದ್ರಶೇಖರ್, ಕಚೇರಿ ನಿರ್ವಾಹಕ ಚಂದ್ರಶೇಖರ್ ಭಟ್ ಅವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News