ಮೃತ ಐವರು ಜೆಡಿಎಸ್ ಕಾರ್ಯಕರ್ತರು, ಪಕ್ಷದ ಆಧಾರಸ್ತಂಭವಾಗಿದ್ದರು: ಕುಮಾರಸ್ವಾಮಿ

Update: 2019-04-23 13:08 GMT

ಉಡುಪಿ, ಎ.23: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣ ಅತ್ಯಂತ ಮೃಗೀಯ ಘಟನೆ. 300ಕ್ಕೂ ಹೆಚ್ಚು ಜನರ ಹತ್ಯೆ ಖಂಡನೀಯ ನೋವಿನ ಘಟನೆ ಎಂದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕಾಪು ಸಮೀಪದ ಮೂಳೂರಿನ ರೆಸಾರ್ಟ್ ಒಂದರಲ್ಲಿ ಆಯುರ್ವೇದಿಕ್ ಚಿಕಿತ್ಸೆಗಾಗಿ ದಾಖಲಾಗಿ, ಚಿಕಿತ್ಸೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಬೆಂಗಳೂರಿಗೆ ಧಾವಿಸುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡು ತಿದ್ದರು.

ರಾಜ್ಯದಿಂದ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ ಏಳು ಮಂದಿ ಕನ್ನಡಿಗರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ನೊಂದ ಈ ಎಲ್ಲಾ ಕುಟುಂಬಗಳಿಗೆ ನನ್ನ ಸಂತಾಪವಿದೆ. ಮೃತರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಭಗವಂತ ನೀಡಲಿ ಎಂದು ಕುಮಾರಸ್ವಾಮಿ ಹಾರೈಸಿದರು.

ಘಟನೆಯಲ್ಲಿ ನನ್ನ (ಜೆಡಿಎಸ್) ಪಕ್ಷದ ಐವರು ಜನನಾಯಕರು ಮೃತ ಪಟ್ಟಿದ್ದಾರೆ. ಅವರು ಪಕ್ಷದ ಆಧಾರಸ್ತಂಭಗಳಾಗಿದ್ದರು. ಪಕ್ಷಕ್ಕೆ ಹಾಗೂ ಅವರ ಕುಟುಂಬಕ್ಕೆ ಘಟನೆ ಆಘಾತ ತಂದಿದೆ. ಇದನ್ನು ನಾನು ಕನಸಿನಲ್ಲೂ ಊಹಿಸಿ ರಲಿಲ್ಲ. ಇವರೆಲ್ಲರೂ ನನ್ನ ಜೊತೆ ಬಹಳ ಆತ್ಮೀಯರಾಗಿದ್ದರು. ರಂಗಣ್ಣ, ಶಿವಣ್ಣ, ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ರಮೇಶ್ ನಮ್ಮ ಪಕ್ಷದ ಶಕ್ತಿಗಳು. ಇದರಿಂದ ನೆಲಮಂಗಲದಲ್ಲಿ ಪಕ್ಷದ ಬಲ ಶೇ.50ರಷ್ಟು ಕುಸಿತವಾಗಿದೆ. ಪ್ರಾಮಾಣಿಕವಾಗಿ ಸಾಮಾಜಿಕ ಸೇವೆ ಮಾಡುವವರನ್ನು ಕಳೆದುಕೊಂಡಿದ್ದೇವೆ ಎಂದು ದು:ಖ ವ್ಯಕ್ತಪಡಿಸಿದರು.

ಕಾರ್ಯದರ್ಶಿಗೆ ಸೂಚನೆ: ರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕೊಡಲಾಗಿದೆ. ಅವರು ಶ್ರೀಲಂಕಾ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ರಾಜ್ಯದ ಏಳು ಪಾರ್ಥಿವ ಶರೀರಗಳನ್ನು ಈಗಾಗಲೇ ಗುರುತಿಸಲಾಗಿದೆ. ಕೊಲಂಬೊದ ಭಾರತೀಯ ರಾಯಭಾರ ಕಚೇರಿಯಲ್ಲಿರುವ ನಮ್ಮವರೇ ಆದ ಮಂಜುನಾಥ್ ಜೊತೆ ಈ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಆಗಾಗ ಕರೆ ಮಾಡಿ ಮಾತನಾಡುತಿದ್ದೇನೆ. ಮರಣೋತ್ತರ ಪ್ರಕ್ರಿಯೆ ಯನ್ನು ಶೀಘ್ರ ಮುಗಿಸಲು ಮನವಿ ಮಾಡಲಾಗಿದೆ ಎಂದರು.

ಪೋಸ್ಟ್‌ಮಾರ್ಟಂ ಮುಗಿದ 24 ಗಂಟೆಯೊಳಗೆ, ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಶರೀರವನ್ನು ಇಲ್ಲಿಗೆ ಕರೆತರಲು ಪ್ರಯತ್ನಿಸುತ್ತೇವೆ. ಈ ಬಗ್ಗೆ ನೆಲಮಂಗಲ ಶಾಸಕ ಡಾ. ಶ್ರೀನಿವಾಸ ಮೂರ್ತಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಕೃಷ್ಣಪ್ಪರಿಗೆ ಜವಾಬ್ದಾರಿ ವಹಿಸಲಾಗಿದೆ. ಖಾಸಗಿ ಏರ್‌ಕಾರ್ ಕಾರ್ಗೋಗೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆಯೊಳಗೆ ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News