ಮಲ್ಲೂರು ಉದ್ದಬೆಟ್ಟು ಮಸೀದಿಯಲ್ಲಿ ನೇರ್ಚೆ : ಅನ್ನ ಬಡಿಸುವ ಮೂಲಕ ಸೌಹಾರ್ದ ಮೆರೆದ ಹಿಂದೂಗಳು

Update: 2019-04-23 14:13 GMT

ಮಂಗಳೂರು, ಎ.23: ಮಲ್ಲೂರು ಸಮೀಪದ ಉದ್ದಬೆಟ್ಟು ಸೈಯದ್ ಹಸನ್ ಹೈದ್ರೋಸ್ ಮಸೀದಿಯಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ‘ನೇರ್ಚೆ’ ಕಾರ್ಯಕ್ರಮದ ಅನ್ನವನ್ನು ಸಾರ್ವಜನಿಕರಿಗೆ ಬಡಿಸುವ ಮೂಲಕ ಸ್ಥಳೀಯ ಹಿಂದೂಗಳು ಸೌಹಾರ್ದ ಮೆರೆದು ಗಮನ ಸೆಳೆದಿದ್ದಾರೆ.

ಈ ಮಸೀದಿಯಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಸೈಯದ್ ಹಸನ್ ಹೈದ್ರೋಸ್ ಹೆಸರಿನಲ್ಲಿ ‘ನೇರ್ಚೆ’ ನಡೆಯುತ್ತದೆ. ಕಳೆದ ರವಿವಾರ 13ನೆ ಬಾರಿಯ ‘ನೇರ್ಚೆ’ ಕಾರ್ಯಕ್ರಮ ನಡೆಯಿತು. ಪ್ರತೀ ಬಾರಿಯೂ ಸುಮಾರು 1.5 ಕಿ.ಮೀ. ದೂರದಲ್ಲಿರುವ ಮಲ್ಲೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಅಕ್ಕಿ, ಸಕ್ಕರೆ, ತೆಂಗಿನಕಾಯಿ, ಬೆಲ್ಲ ಇತ್ಯಾದಿಯನ್ನೊಳಗೊಂಡ ಹೊರೆ ಕಾಣಿಕೆಯನ್ನು ಸಲ್ಲಿಸಲಾಗುತ್ತದೆ. ಈ ಬಾರಿ ಹಲವು ಹಿಂದೂ ಯುವಕರು ಮಸೀದಿಯ ಆವರಣದಲ್ಲಿ ನಡೆಯುತ್ತಿದ್ದ ದುಆ ಮಜ್ಲಿಸ್‌ನಲ್ಲಿ ಪಾಲ್ಗೊಂಡರಲ್ಲದೆ ಸಾರ್ವಜನಿಕರಿಗೆ ನೀಡಲಾಗುವ ಅನ್ನದಾನ (ತುಪ್ಪದೂಟ ಮತ್ತು ಆಡಿನ ಮಾಂಸದ ಪದಾರ್ಥ) ಬಡಿಸುವ ಮೂಲಕ ಸೌಹಾರ್ದ ಮೆರೆದರು. ಈ ‘ನೇರ್ಚೆ’ಯಲ್ಲಿ ಮುಸ್ಲಿಮರಿಗಿಂತಲೂ ಸ್ಥಳೀಯ ಹಿಂದೂಗಳೇ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಇಲ್ಲಿನ ವಿಶೇಷವಾಗಿದೆ.

ಸಾರ್ವಜನಿಕ ಅನ್ನದಾನ ಬಡಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಘು ಅಡಪ ಮಾತನಾಡಿ ‘ಉದ್ದಬೆಟ್ಟುವಿನಲ್ಲಿ ಶಾಂತಿ ನೆಲಸಬೇಕು, ಹಿಂದೂ-ಮುಸ್ಲಿಮರು ಸೌಹಾರ್ದದಿಂದ ಬದುಕು ಸಾಗಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಹಾಗಾಗಿ ನಾವು ಮೂರು ವರ್ಷಕ್ಕೊಮ್ಮೆ ನಡೆಯುವ ಕಾರ್ಯಕ್ರಮಕ್ಕೆ ಹೊರೆ ಕಾಣಿಕೆ ಸಲ್ಲಿಸುತ್ತಿದ್ದೇವೆ. ಈ ಬಾರಿ ನಾವು ಸುಮಾರು 22 ಮಂದಿ ಅನ್ನದಾನದ ಸಂದರ್ಭ ಪ್ರಸಾದವನ್ನು ಹಂಚುವ ಕಾರ್ಯದಲ್ಲೂ ತೊಡಗಿಸಿಕೊಂಡೆವು. ಇದನ್ನು ನಮ್ಮ ಮುಂದಿನ ಪೀಳಿಗೆಯೂ ಮುಂದುವರಿಸಬೇಕಾಗಿದೆ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News