ಮಕ್ಕಳ ಬಾಲ್‌ಗೆ ಔಟ್ ಆದ ರಾಹುಲ್ ದ್ರಾವಿಡ್ !

Update: 2019-04-23 14:31 GMT

ಮಂಗಳೂರು, ಎ. 23: ಕ್ರಿಕೆಟ್‌ನ ಗೋಡೆ ಎಂದೇ ಕರೆಯಲ್ಪಡುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಮಕ್ಕಳ ಬಾಲ್‌ಗೆ ಬ್ಯಾಟ್ ಬೀಸಿ ಕ್ಯಾಚೌಟ್ ಆಗಿ ಸಂಭ್ರಮಿಸಿದರು.

ಮಣಿಪಾಲ ಆಸ್ಪತ್ರೆಗಳ ರಾಯಭಾರಿ (ಬ್ರಾಂಡ್ ಅಂಬಾಸಿಡರ್) ಆಗಿರುವ ರಾಹುಲ್ ದ್ರಾವಿಡ್ ನಗರಕ್ಕೆ ಭೇಟಿ ನೀಡಿ ಮಣಿಪಾಲ ಆರೋಗ್ಯ ಕಾರ್ಡ್‌ಗೆ ಮಂಗಳೂರಿನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಮಾತನಾಡಿದರಲ್ಲದೆ ಅವರ ಬಾಲ್‌ಗೆ ಬ್ಯಾಟ್ ಬೀಸಿ ಮಕ್ಕಳಲ್ಲಿ ಹುರುಪು ತುಂಬಿದರು.

ಬಾಲಕನೊಬ್ಬ ಬಾಲ್ ಎಸೆದಾಗ ರಾಹುಲ್ ಅವರು ಮಕ್ಕಳತ್ತ ಮೃದುವಾಗಿಯೇ ಬ್ಯಾಟ್ ಬೀಸಿದರು. ತನ್ನತ್ತ ಬಂದ ಬಾಲನ್ನು ಬಾಲಕನೊಬ್ಬ ಕ್ಯಾಚ್ ಹಿಡಿದಿದ್ದು, ತನ್ನನ್ನು ಕ್ಯಾಚೌಟ್ ಮಾಡಿದ ಬಾಲಕನನ್ನು ಅಭಿನಂದಿಸಿದರು. ಬಳಿಕ ಮಕ್ಕಳ ಸೆಲ್ಫಿಗೆ ಸ್ಪಂದನೆ ನೀಡಿದರು.

ಇದಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಬಿಡುಗಡೆ ಮಾಡಿದ ರಾಹುಲ್ ದ್ರಾವಿಡ್ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಕ್ರಿಕೆಟ್ ಟೀಮ್‌ನಲ್ಲಿ ಉಳಿಯ ಬೇಕಾದರೆ ಎಲ್ಲಾ ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲಿ ಪರಿಣತಿ ಪಡೆಯುವುದು (ಟೆಸ್ಟ್, ಏಕದಿನ, ಟ್ವೆಂಟಿ ಟ್ವೆಂಟಿ) ಅಗತ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಂದಿನ ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡ ಅತ್ಯಂತ ಉತ್ತವು ಪ್ರದರ್ಶನ ತೋರಲಿದೆ ಎಂದರು.

ಭಾರತ ಕ್ರಿಕೆಟ್ ತಂಡ ಕಳೆದ ಎರಡು ವರ್ಷಗಳಲ್ಲಿ ಚೆನ್ನಾಗಿ ನಿರ್ವಹಣೆ ತೋರುತ್ತಿದೆ. ತಂಡದ ಆಟಗಾರರು ಕೂಡಾ ಸಾಕಷ್ಟು ಆತ್ಮ ಸ್ಥೈರ್ಯವನ್ನು ಬೆಳೆಸಿಕೊಂಡಿದ್ದಾರೆ. ಇದು ಮುಂದಿನ ವಿಶ್ವ ಕಪ್‌ಗೆ ಪೂರಕವಾಗಲಿದೆ ಎಂದು ಅವರು ಅಭಿಪ್ರಾಯಿಸಿದರು.

ಕರ್ನಾಟಕದ ಕೆ.ಎಲ್. ರಾಹುಲ್ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ದ್ರಾವಿಡ್, ಆತ ವಿಶೇಷ ಆಟಗಾರ. ಆತನ ಮೇಲೆ ಸಾಕಷ್ಟು ನಿರೀಕ್ಷೆ ಇದೆ ಎಂದರು. ಆತ ಎಲ್ಲಾ ಕ್ರಿಕೆಟ್ ಮಾದರಿಯಲ್ಲೂ ತನ್ನ ಸಾಧನೆಯನ್ನು ತೋರಿದ್ದಾರೆ. ಭಾರತೀಯ ಕ್ರಿಕೆಟ್ ತಂಡಕ್ಕ ಸೇರ್ಪಡೆಗೊಂಡ ಬಳಿಕ ಆತನ ನಿರ್ವಹಣೆ ಉತ್ತಮವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಆತನ ನಿರ್ವಣೆಯಲ್ಲಿ ಸಾಕಷ್ಟು ಏರಿಳಿತವಾಗಿದೆ. ಆದರೆ ಆತ ಚೆನ್ನಾಗಿ ಆಡುತ್ತಾನೆಂಬ ನಿರೀಕ್ಷೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೊ ಚಾನ್ಸೆಲರ್ ಡಾ.ಎಚ್.ಎಸ್. ಬಲ್ಲಾಳ್ ಉಪಸ್ಥಿತರಿದ್ದು ಆರೋಗ್ಯ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಕೆಎಂಸಿ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್, ಕೆಎಂಸಿ ಆಸ್ಪತ್ರೆಯ ರೀಜಿನಲ್ ಚೀಫ್ ಅಪರೇಟಿಂಗ್ ಆಫೀಸರ್ ಸಗೀರ್ ಸಿದ್ದೀಕಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News