‘ನಾನು ಗೋಡೆಯಲ್ಲ; ರಾಹುಲ್ ದ್ರಾವಿಡ್ ಅಷ್ಟೇ’

Update: 2019-04-23 15:05 GMT

ಉಡುಪಿ, ಎ.23:‘ನಾನೇನೂ ಗೋಡೆಯಲ್ಲ; ರಾಹುಲ್ ದ್ರಾವಿಡ್ ಅಷ್ಟೇ. ನನ್ನನ್ನು ‘ಗೋಡೆ’ ಎಂದು ಮೊದಲು ಕರೆದವರು ಪತ್ರಕರ್ತರೊಬ್ಬರು. ಅವರು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟು ಹಾಗೆ ಬರೆದಿರಬೇಕು. ನಾನು ಕ್ಲಿಕ್ ಆದರೆ ಕ್ರಿಕೆಟ್‌ನ ಗೋಡೆ, ವಿಫಲನಾದರೆ ಗೋಡೆ ಉರುಳಿತು ಎಂದು ಬರೆಯಲು ಹಾಗೆ ಬರೆದಿರಬಹುದು. ಆದರೆ ನಾನೆಂದೂ ನನ್ನನ್ನು ಗೋಡೆ ಎಂದು ಭಾವಿಸಿಲ್ಲ. ಆವತ್ತಿಗೂ, ಇವತ್ತಿಗೂ ನಾನು ರಾಹುಲ್ ದ್ರಾವಿಡ್ ಆಗಿಯೇ ಉಳಿದಿದ್ದೇನೆ.’

ಹೀಗೆಂದವರು ‘ಭಾರತೀಯ ಕ್ರಿಕೆಟ್‌ನ ಗೋಡೆ’ ಎಂದೇ ತನ್ನ ಆಟದ ದಿನಗಳಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದ, ಭಾರತೀಯ ಕ್ರಿಕಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್.

ಮಾಹೆ ಹಾಗೂ ಕೆಎಂಸಿಯ ಆಹ್ವಾನದ ಮೇಲೆ ಇದೇ ಮೊದಲ ಬಾರಿಗೆ ಮಣಿಪಾಲಕ್ಕೆ ಭೇಟಿ ನೀಡಿದ ರಾಹುಲ್ ದ್ರಾವಿಡ್ ಮಣಿಪಾಲ ವಿವಿಯ ಮೆರಿನಾ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಲಾದ ಮಣಿಪಾಲ ಆಸುಪಾಸಿನ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮ ದಲ್ಲಿ ಕ್ರಿಕೆಟ್ ಅಭಿಮಾನಿಯೊಬ್ಬನ ಪ್ರಶ್ನೆಗೆ ಉತ್ತರಿಸುತಿದ್ದರು.

ತನ್ನ ಆಟದ ದಿನಗಳಲ್ಲಿ ವೇಗದ ಹಾಗೂ ಸ್ಪಿನ್ ಎಸೆತಗಳೆರಡನ್ನೂ ಲೀಲಾಜಾಲವಾಗಿ ಎದುರಿಸುತಿದ್ದಂತೆ, ಇಂದು ತನಗಿಂತ ಕಿರಿಯರ ಪ್ರಶ್ನೆ ಎಂಬ ಎಸೆತವನ್ನು ಸ್ವಲ್ಪವೂ ಅಳುಕಿಲ್ಲದೇ ಉತ್ತರಿಸಿ, ಪದೇ ಪದೇ ವಿದ್ಯಾರ್ಥಿಗಳಿಂದ ಕರತಾಡನ ಮೆಚ್ಚುಗೆಯನ್ನು ಸಂಪಾದಿಸಿದರು.

ಒಂದು ವೇಳೆ ಕ್ರಿಕೆಟ್‌ನಲ್ಲಿ ವೈಫಲ್ಯತೆ ಕಂಡಿದ್ದರೆ, ಬೇರೆ ಯಾವ ಕ್ಷೇತ್ರದಲ್ಲಿ ಇರುತಿದ್ದಿರಿ ಎಂದು ಕೇಳಿದಾಗ, ನಾನು ಕಾಮರ್ಸ್‌ನಲ್ಲಿ ಪದವಿ ಪಡೆದಿದ್ದೆ. ಕಾಲೇಜಿಗೆ ಹೋಗುವಾಗಲೇ ಕ್ರಿಕೆಟ್‌ನಲ್ಲಿ ಸಾಕಷ್ಟು ಅವಕಾಶ ಪಡೆದಿದ್ದೆ. ಒಂದು ವೇಳೆ ಅಲ್ಲಿ ವಿಫಲನಾಗಿದ್ದರೆ ಬದಲಿಯಾಗಿ ಸಿಎ ಮಾಡುವುದು ಅಥವಾ ಮಣಿಪಾಲದ ಟ್ಯಾಪ್ಮಿಯಲ್ಲಿ ಓದು ಮುಂದುವರಿಸುವ ಯೋಜನೆ ಹಾಕಿಕೊಂಡಿದ್ದೆ. ಆದರೆ ನನಗೆ ಮಣಿಪಾಲಕ್ಕೆ ಬರುವ ಅವಕಾಶ ಈವರೆಗೆ ಸಿಕ್ಕಿರಲಿಲ್ಲ ಎಂದು ನಕ್ಕರು.

ನನಗೇನೂ ಕ್ರಿಕೆಟ್ ಆಟಗಾರನಾಗಬೇಕೆಂಬ ಉದ್ದೇಶ ಇರಲಿಲ್ಲ. ಚಿಕ್ಕವನಿದ್ದಾಗ ಬೆಂಗಳೂರಿನ ಸಾಮಾನ್ಯ ಹುಡುಗರಂತೆ ನಾನೂ ಬೀದಿಯಲ್ಲಿ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳನ್ನು ಆಡುತಿದ್ದೆ. ತಂದೆ ಕ್ರಿಕೆಟ್ ಪ್ರೇಮಿಯಾಗಿದ್ದರು. ಗಾವಸ್ಕರ್ ಮತ್ತು ನಮ್ಮ ವಿಶ್ವನಾಥ್ ಅವರ ನೆಚ್ಚಿನ ಕ್ರಿಕೆಟಿಗರಾಗಿದ್ದರು. ಬೆಂಗಳೂರಿನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳಿಗೆ ಅವರು ನನ್ನನ್ನು ಕರೆದೊಯ್ಯುತಿದ್ದರು. ಆದರೆ ಶಾಲಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಒಳ್ಳೆಯ ಪ್ರದರ್ಶನ ನೀಡತೊಡಗಿದಾಗ ನನಗೆ ಇದರಲ್ಲಿ ಹೆಚ್ಚಿನ ಆಸಕ್ತಿ ಮೂಡಿತು ಎಂದು ದ್ರಾವಿಡ್, ಕ್ರಿಕೆಟಿಗನಾಗಿ ಮುಂಚೂಣಿಗೆ ಬಂದ ರೀತಿಯನ್ನು ವಿವರಿಸಿದರು.

ಪ್ರೌಢ ಶಾಲೆ, ಕಾಲೇಜು ತಂಡದಲ್ಲಿದ್ದಾಗ ಹೆಚ್ಚು ಕ್ರಿಕೆಟ್ ಆಡತೊಡಗಿದೆ. ಇದರಿಂದ ರಾಜ್ಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿ, ಕ್ರಿಕೆಟ್‌ನ್ನು ಗಂಭೀರವಾಗಿ ತೆಗೆದುಕೊಂಡೆ. ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದ ಬಳಿಕ ನನ್ನ ದೃಷ್ಟಿಕೋನ ಬದಲಾಯಿತು. ಪ್ರತಿಬಾರಿಯೂ ಚೆನ್ನಾಗಿ ಆಡಬೇಕೆಂದು ಹೆಚ್ಚು ಪ್ರಯತ್ನಕ್ಕಿಳಿದೆ ಎಂದರು.

ಟೆಸ್ಟ್‌ನಿಂದ 20-20ವರೆಗೆ

ಮೂಲತ: ನಾನು ಟೆಸ್ಟ್ ಕ್ರಿಕೆಟಿಗ. ಈಗಲೂ ನಾನು ಇಷ್ಟ ಪಡುವುದು ಟೆಸ್ಟ್ ಕ್ರಿಕೆಟನ್ನು. ನನ್ನ ಮೊದಲ ಕೋಚ್ ತಾರಪುರೆ, ಅಭ್ಯಾಸದ ವೇಳೆ ಚೆಂಡನ್ನು ಗಾಳಿಯಲ್ಲಿ ಬಾರಿಸಿದರೆ, ಮೈದಾನಕ್ಕೆ ಮೂರು ಸುತ್ತು ಬರುವ ಶಿಕ್ಷೆ ನೀಡುತಿದ್ದರು. ಆಗ ಪಂತ್ ಅಂಥದವರು ಇದ್ದರೆ ಇಡೀ ದಿನ ಮೈದಾನಕ್ಕೆ ಸುತ್ತು ಬರುತ್ತಲೇ ಇರಬೇಕಿತ್ತು ಎಂದಾಗ ಸಭಾಂಗಣದಲ್ಲಿ ನಗುವಿನ ಅಲೆ ಎದ್ದಿತು.

ಹೀಗಾಗಿ ನಾನು ಟೆಸ್ಟ್ ಆಟಗಾರನಾಗಿ ರೂಪುಗೊಂಡಿದ್ದೆ. ಆಗ ಏಕದಿನ ಕ್ರಿಕೆಟ್ ಇದ್ದರೂ, 20-20 ಇನ್ನೂ ಪ್ರಾರಂಭಗೊಂಡಿರಲಿಲ್ಲ. ಟೆಸ್ಟ್‌ನಲ್ಲಿ ಆಟಕ್ಕೆ ಹೊಂದಿಕೊಳ್ಳಲು ಒಂದೆರಡು ಗಂಟೆ ಬೇಕಾಗುತ್ತದೆ. ಇಂದು ಏಕದಿನ ಹಾಗೂ 20-20ಯಲ್ಲಿ ಹೀಗೆ ಆಡಿದರೆ ಪ್ರೇಕ್ಷಕರೇ ನನ್ನನ್ನು ಮನೆಗೆ ಕಳುಹಿಸುತ್ತಾರೆ. ಆದರೆ ನಾನು ಟೆಸ್ಟ್‌ನೊಂದಿಗೆ ಏಕದಿನಕ್ಕೂ ಕೂಡಲೇ ಹೊಂದಿಕೊಂಡೆ. 20-20 ಪ್ರಾರಂಭಗೊಂಡಾಗ ಅದರಲ್ಲೂ ಆಡಿದೆ. ಮೂಲತ: ನಾನು ಟೆಸ್ಟ್ ಕ್ರಿಕೆಟಿಗ ನಾದರೂ, ನಿಗದಿತ ಓವರುಗಳ ಕ್ರಿಕೆಟ್‌ಗೂ ನನ್ನ ಮನೋರೂಢಿಯನ್ನು ಬದಲಿಸಿಕೊಂಡು ಯಶಸ್ವಿಯಾದೆ. ಹೀಗಾಗಿ ಮೂರು ವಿಧದ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ನನಗೆ ಲಭಿಸಿತು.

ವಿದ್ಯಾಭ್ಯಾಸವೂ ಮುಖ್ಯ

ಶಿಕ್ಷಣ ಹಾಗೂ ಕ್ರೀಡೆ ಇವರೆಡರಲ್ಲಿ ಯಾವುದು ಮುಖ್ಯ ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್, ಎರಡು ಕೂಡಾ ತುಂಬಾ ಮುಖ್ಯ. ಇಂದು ಕ್ರೀಡೆ ವೃತ್ತಿಪರವಾಗಿದೆ. ಐಪಿಎಲ್, ಲೀಗ್‌ಗಳಿಂದಾಗಿ ಕ್ರಿಕೆಟಿಗರೂ ವೃತ್ತಿಪರರಾಗಿ ಸಾಕಷ್ಟು ದೊಡ್ಡ ಮೊತ್ತ ಪಡೆಯುತ್ತಾರೆ. ಹೀಗಾಗಿ ಜನರಲ್ಲೂ ಈಗ ಕ್ರೀಡೆಯ ಕುರಿತು ದೃಷ್ಟಿಕೋನ ನಿಧಾನವಾಗಿ ಬದಲಾಗುತ್ತಿದೆ. ಆದರೆ ನೀವು ಕ್ರೀಡೆ ಮತ್ತು ಶಿಕ್ಷಣ ಜೊತೆಯಾಗಿಯೇ ಸಾಗಬೇಕಾಗಿದೆ.

ವಿಶ್ವಕಪ್ ತಂಡ

ಜೂನ್ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಭಾರತ ತಂಡದ ಆಯ್ಕೆಯ ಬಗ್ಗೆ ಅಭಿಪ್ರಾಯ ಕೇಳಿದಾಗ, ದೇಶದ ಪ್ರತಿಯೊಬ್ಬ ರಿಗೂ ಅವರವರ ಅಭಿಪ್ರಾಯಗಳಿವೆ. ನೋಡಿ ಭಾರತದಲ್ಲಿ ಈಗ ಪ್ರತಿಭಾನ್ವಿ ಆಟಗಾರರ ದೊಡ್ಡ ದಂಡೇ ಇದೆ. ಭಾರತ ಎ ತಂಡದ ಆಟಗಾರರೂ ಉತ್ತಮ ಆಟಗಾರರು. ಮನಿಷ್ ಪಾಂಡೆ ಹಾಗೂ ವೃಷಭ್ ಪಂತ್‌ರಂಥ ಒಳ್ಳೆಯ ಆಟಗಾರರಿಗೂ ಸ್ಥಾನ ಸಿಕ್ಕಿಲ್ಲ. ಆಯ್ಕೆಗಾರರು ಕೆಲವು ಮಾನದಂಡಗಳೊಂದಿಗೆ ಒಳ್ಳೆಯ ತಂಡವನ್ನು ಆಯ್ಕೆ ಮಾಡಿದ್ದಾರೆ. ತಂಡದಲ್ಲಿ ಸ್ಥಾನವಿರುವುದು ಕೇವಲ 15 ಮಂದಿಗೆ ಮಾತ್ರ. ಹೀಗಾಗಿ ನಾವು ವಾದವನ್ನು ಹೇಗೂ ಮಾಡಬಹುದು. ಆದರೆ ನಾನು ಯಾರೊಬ್ಬರ ಪರವಾಗಿ ಮಾತನಾಡಲಾರೆ ಎಂದರು.

ನೀವು ಮೈದಾನದಲ್ಲಿ ಅಷ್ಟೊಂದು ಕೂಲ್ ಆಗಿರಲು ಹೇಗೆ ಸಾಧ್ಯವಾಗಿದೆ ಎಂದು ಕೇಳಿದಾಗ, ನಾನು ಮೈದಾನದೊಳಗೆ ಕೂಲ್ ಆಗಿರಬಹುದು. ಆದರೆ ಹೊರಗೆ ಹಾಗಿಲ್ಲ. ಅದು ಅನುಭವದಿಂದ ಬರುವುದು. ಎಲ್ಲರೂ ಒಂದೇ ರೀತಿ ಆಗಿರಲು ಸಾಧ್ಯವಿಲ್ಲ. ಎಲ್ಲರಿಂದಲೂ ಒಂದೇ ರೀತಿಯ ನಡವಳಿಕೆ ನಿರೀಕ್ಷಿಸಲು ಸಾಧ್ಯವಿಲ್ಲ. ದ್ರಾವಿಡ್ ಎಂದೂ ವೀರೇಂದ್ರ ಸೆಹವಾಗ್ ಆಗಲಾರ. ಹಾಗೂ ಸೆಹವಾಗ್, ದ್ರಾವಿಡ್ ಅಲ್ಲ. ಫೀಲ್ಡ್‌ನಲ್ಲಿ ನಾನು ಸ್ಥಿತಪ್ರಜ್ಞನಂತಿರುತ್ತೇನೆ ಎಂದರು.

ಕ್ರೀಡೆಯಲ್ಲಿ ಇಂದು ಫಿಸಿಯೋಥೆರಪಿಸ್ಟ್‌ನ ಪಾತ್ರದ ಮಹತ್ವವನ್ನು ಎಲ್ಲರೂ ಅರಿತಿದ್ದಾರೆ. ಹೀಗಾಗಿ ಕ್ರಿಕೆಟ್ ಸೇರಿದಂತೆ ಪ್ರತಿ ಕ್ರೀಡಾ ತಂಡಗಳಲ್ಲಿ ಇಂದು ಫಿಸಿಯೋಥೆರಪಿಸ್ಟ್ ಇದ್ದೇ ಇರುತ್ತಾರೆ. ಭಾರತ ಕ್ರಿಕೆಟ್ ತಂಡದಲ್ಲೂ ವಿಶ್ವ ದರ್ಜೆಯ ಫಿಸಿಯೋ ಇದ್ದಾರೆ. ಕ್ರೀಡಾಪಟುಗಳು ದೈಹಿಕ ಕ್ಷಮತೆ ಕಾಪಾಡಲು, ಗಾಯದಿಂದ ಮುಕ್ತರಾಗಲು ಇವರ ಪಾತ್ರ ಮಹತ್ವದ್ದು ಎಂದರು.

ಇದೇ ವೇಳೆ ದ್ರಾವಿಡ್ 2020ರ ಫೆ.9ರಂದು ನಡೆಯುವ ಮಣಿಪಾಲ್ ಮೆರಥಾನ್‌ನ ಥೀಮ್ ‘ರನ್ ಫಾರ್ ಆರ್ಗನ್ ಡೊನೇಶನ್’ ಅನಾವರಣ ಗೊಳಿಸಿದರು. ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ. ಎಚ್. ಎಸ್.ಬಲ್ಲಾಳ್, ಬೆಂಗಳೂರಿನ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಲಿ.ನ ಅಧ್ಯಕ್ಷ ಡಾ.ಎಚ್. ಸುದರ್ಶನ ಬಲ್ಲಾಳ್, ಮಾಹೆ ಸಹಕುಲಪತಿ ಡಾ. ಪೂರ್ಣಿಮಾ ಬಲ್ಲಾಳ್, ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ.ವಿನೋದ ನಾಯಕ್, ಜತೆ ಕಾರ್ಯದರ್ಶಿ ಶೋಭಾ ವೀರಪ್ಪ, ಮಂಗಳೂರು ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ವೇಣುಗೋಪಾಲ್, ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಕೆಎಂಸಿಯ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ಸಿ.ಜಿ.ಮುತ್ತಣ ಮೊದಲಾದವರು ಉಪಸ್ಥಿತರಿದ್ದರು.

ಫೈನಲಿಗೆ 4-5 ತಂಡಗಳು ಅರ್ಹ

ಈ ಬಾರಿಯ ವಿಶ್ವಕಪ್‌ನ್ನು ಗೆಲ್ಲುವ ನೆಚ್ಚಿನ ತಂಡ ಯಾವುದು ಎಂದು ದ್ರಾವಿಡ್‌ರನ್ನು ಕೇಳಿದಾಗ, ಆತಿಥೇಯ ತಂಡವಾಗಿ ಇಂಗ್ಲೆಂಡ್ ಉತ್ತಮ ಆಟಗಾರ ರನ್ನು ಹೊಂದಿದೆ. ಅಲ್ಲಿನ ವಾತಾವರಣವೂ ಇಂಗ್ಲೆಂಡ್‌ಗೆ ಪೂರಕವಾಗಿರಲಿದೆ. ಅದೇ ರೀತಿ ಆಸ್ಟ್ರೇಲಿಯ ಕೂಡಾ ಉತ್ತಮ ಆಟಗಾರರ ನ್ನೊಳಗೊಂಡಿದೆ. ಹೀಗಾಗಿ ಭಾರತ ಸೇರಿದಂತೆ 4-5 ತಂಡಗಳು ವಿಶ್ವಕಪ್‌ನ ಫೈನಲ್‌ಗೇರುವ ಎಲ್ಲಾ ಅರ್ಹತೆಯನ್ನು ಹೊಂದಿವೆ ಎಂದು ದ್ರಾವಿಡ್ ತಿಳಿಸಿದರು.

2008-09 ಕ್ರಿಕೆಟ್ ಬದುಕಿನ ಕಠಿಣ ದಿನಗಳು

ನನ್ನ ಕ್ರಿಕೆಟ್ ಬದುಕಿನಲ್ಲಿ 2008-09ನೇ ಸಾಲು ಅತ್ಯಂತ ಕಠಿಣ ದಿನಗಳಾಗಿ ದ್ದವು. ಆಗ ನಾನು ತಾತ್ಕಾಲಿಕವಾಗಿ ನನ್ನ ಫಾರ್ಮ್‌ನ್ನು ಕಳೆದುಕೊಂಡಿದ್ದೆ. ಇದು ಕ್ರೀಡಾಪಟುವಿನ ಬದುಕಿನಲ್ಲಿ ಸಾಮಾನ್ಯ. ಆಗ ನನ್ನ ಸಾಮರ್ಥ್ಯದ ಬಗ್ಗೆ ಸಂದೇಹಗಳು ವ್ಯಕ್ತವಾದವು. ಏಕದಿನ ಕ್ರಿಕೆಟ್‌ನಿಂದ ನಾನು ಹೊರಗುಳಿಯ ಬೇಕಾಯಿತು.

ಆದರೆ ನನಗೆ ನನ್ನ ಸಾಮರ್ಥ್ಯದ ಬಗ್ಗೆ ನಂಬಿಕೆಯಿತ್ತು. ಇದು ತಾತ್ಕಾಲಿಕ ಅವಧಿ ಎಂದು ನಂಬಿದ್ದೆ. ಹೀಗಾಗಿ ಭಾರತ ತಂಡದಿಂದ ಕೈಬಿಟ್ಟರೂ, ಕರ್ನಾಟಕ ರಣಜಿ ತಂಡದಲ್ಲಿ ಆಡುವ ನಿರ್ಧಾರ ಮಾಡಿದ್ದೆ. ಏಕೆಂದರೆ ನಾನು ಕ್ರೀಡೆಯನ್ನು ಅಷ್ಟೊಂದು ಪ್ರೀತಿಸುತಿದ್ದೆ ಎಂದು ದ್ರಾವಿಡ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News