ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.75.26ರಷ್ಟು ಮತದಾನ

Update: 2019-04-23 15:13 GMT

ಬೈಂದೂರು, ಎ.23: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆದಿದ್ದು, ಇಡೀ ಲೋಕಸಭಾ ಕ್ಷೇತ್ರದ ಉಳಿದ ವಿಧಾನಸಭಾ ಕ್ಷೇತ್ರಗಳಿಗಿಂತ ಬೈಂದೂರಿನಲ್ಲಿ ಅತ್ಯಂತ ಹೆಚ್ಚು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.

ಬೈಂದೂರು ಕ್ಷೇತ್ರದಲ್ಲಿ ಬೈಂದೂರು ತಾಲೂಕಿನ 26 ಮತ್ತು ಕುಂದಾಪುರ ತಾಲೂಕಿನ 39 ಸೇರಿದಂತೆ ಒಟ್ಟು 65 ಗ್ರಾಮಗಳಲ್ಲಿರುವ 246 ಮತಗಟ್ಟೆ ಗಳಲ್ಲಿ 1,10,237 ಪುರುಷ, 1,16,349 ಮಹಿಳೆ, ಓರ್ವ ಅನ್ಯ ಸೇರಿ ಒಟ್ಟು 2,26,587 ಮತದಾರರ ಪೈಕಿ ಶೇ.75.26ರಷ್ಟು ಮಂದಿ ಇಂದು ತಮ್ಮ ಮದಾನದ ಹಕ್ಕನ್ನು ಚಲಾಯಿಸಿದ್ದಾರೆ.

2018ರ ನ.3ರಂದು ನಡೆದ ಶಿವಮೊಗ್ಗ ಕ್ಷೇತ್ರದ ಉಪಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಶೇ.58.98ರಷ್ಟು, 2104ರ ಲೋಕಸಭಾ ಚುನಾವಣೆ ಯಲ್ಲಿ ಶೇ.72.92ರಷ್ಟು ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಶೇ. 79.08ರಷ್ಟು ಮತದಾನವಾಗಿತ್ತು.

ಕೈಕೊಟ್ಟ ಮತಯಂತ್ರಗಳು: ಕ್ಷೇತ್ರದ ಹಲವು ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ಮತದಾನ ಪ್ರಕ್ರಿಯೆ ವಿಳಂಬವಾಗಿ ಆರಂಭಗೊಂಡು ಮತದಾನ ಕೇಂದ್ರಗಳಲ್ಲಿ ಸರತಿ ಸಾಲುಗಳು ಕಂಡುಬಂದವು.

ಹೆಮ್ಮಾಡಿಯ ಸಖಿ ಮತಗಟ್ಟೆಯಲ್ಲಿ ಮತಯಂತ್ರದಲ್ಲಿನ ದೋಷದಿಂದ ಮತದಾನವು ಸುಮಾರು 45 ನಿಮಿಷಗಳ ಕಾಲ ವಿಳಂಬವಾಗಿ ಆರಂಭ ವಾಯಿತು. ಅದೇ ರೀತಿ ವಂಡ್ಸೆ, ಜನ್ಸಾಲೆ, ನೆಂಪು ಮತದಾನ ಕೇಂದ್ರಗಳಲ್ಲಿ ಮತಯಂತ್ರಗಳಲಿ್ಲ ಸಮಸ್ಯೆಗಳು ಕಂಡುಬಂದವು.

ಉಳ್ಳೂರು-74 ಗ್ರಾಮದ ವಾರಾಹಿ ಮತಗಟ್ಟೆಯಲ್ಲಿ ಮೂರು ಬಾರಿ ವಿವಿ ಪ್ಯಾಟ್‌ನ್ನು ಬದಲಾಯಿಸಬೇಕಾದ ಪರಿಸ್ಥಿತಿ ಉಂಟಾಯಿತು. ಕೇಂದ್ರದಲ್ಲಿ ಸೂರ್ಯ ಬೆಳಕು ನೇರವಾಗಿ ಮತಯಂತ್ರದ ಮೇಲೆ ಬೀಳುತ್ತಿದ್ದ ಪರಿಣಾಮ ಈ ಸಮಸ್ಯೆ ಎದುರಾಯಿತು. ಬಳಿಕ ಸ್ಥಳ ಬದಲಾಯಿಸಿ ಸುಗಮ ಮತದಾನಕ್ಕೆ ಅನುವು ಮಾಡಿಕೊಡಲಾಯಿತು.

ಕೆಲವು ಮತದಾನ ಕೇಂದ್ರಗಳಲ್ಲಿ ಬೆಳಕಿನ ಕೊರತೆಯ ಸಮಸ್ಯೆ ಕೂಡ ಎದುರಾಗಿತ್ತು. ಇದರಿಂದ ಮತದಾನ ಬಹಳ ನಿಧಾನವಾಗಿ ನಡೆಯಿತು. ಹೀಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಬ್ಯಾಲೆಟ್ ಯೂನಿಟ್, ಮೂರು ಕಂಟ್ರೋಲ್ ಯೂನಿಟ್ ಹಾಗೂ 9 ವಿವಿಪ್ಯಾಟ್‌ಗಳನ್ನು ಬದಲಾಯಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐದು ಸಖಿಮತಗಟ್ಟೆಗಳು: ಬೈಂದೂರು ಕ್ಷೇತ್ರ ವ್ಯಾಪ್ತಿಯ ಹೆಮ್ಮಾಡಿ ಸರಕಾರಿ ಶಾಲೆಯಲ್ಲಿ ಎರಡು ಮತ್ತು ತಲ್ಲೂರು ಶಾಲೆಯಲ್ಲಿ ಮೂರು ಸಖಿ ಮತಗಟ್ಟೆಗಳಲ್ಲಿ ಮಾಡಲಾದ ವಿಶೇಷ ವ್ಯವಸ್ಥೆಗಳು ಗಮನ ಸೆಳೆದವು.

ಇಲ್ಲಿ ತಾಯಿಯೊಂದಿಗೆ ಆಗಮಿಸುವ ಮಕ್ಕಳಿಗೆ ಆಟ ಆಡಲು ಬೇಕಾದ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅಲ್ಲದೆ ವಿಶೇಷವಾಗಿ ರಚಿಸಲಾದ ಸೆಲ್ಫಿ ಪಾಯಿಂಟ್‌ನಲ್ಲಿ ಮಹಿಳೆಯರು ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆದು ಸಂಭ್ರಮಿಸಿದರು. ಇದರಿಂದ ಈ ಮತಗಟ್ಟೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಹೆಮ್ಮಾಡಿ ಮತಗಟ್ಟೆಯಲ್ಲಿ ಮೊದಲ ಬಾರಿ ಮತದಾನ ಮಾಡಿದ ಕುಂದಾ ಪುರ ಭಂಡಾರ್ಕರ್ಸ್‌ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿನಿ ಹೆಮ್ಮಾಡಿಯ ತೃಪ್ತಿ ತಮ್ಮ ಖುಷಿಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು. ಪ್ರತಿಯೊಂದು ಮತ ಕೂಡ ಮುಖ್ಯವಾಗಿದ್ದು, ಒಂದು ಮತದಲ್ಲೂ ಬದಲಾವಣೆ ಮಾಡಲು ಸಾಧ್ಯ. ಆದುದರಿಂದ ಹೊಸ ಮತದಾರರು ಮುತುವರ್ಜಿಯಿಂದ ಮತದಾನ ಮಾಡಬೇಕು ಎಂದು ತೃಪ್ತಿ ಹೇಳಿದರು.

ಅದೇ ರೀತಿ ವಿಶೇಷಚೇತನರಿಗೆ, ಅಶಕ್ತರಿಗೆ, ಗರ್ಭಿಣಿಯರಿಗೆ ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ವಾಹನ ಹಾಗೂ ಗಾಲಿ ಕುರ್ಚಿ ಸೌಲಭ್ಯ ಗಳನ್ನು ಮತಗಟ್ಟೆಗಳಲ್ಲಿ ಕಲ್ಪಿಸಲಾಗಿತ್ತು. ಕೆಲವು ಮತಗಟ್ಟೆಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ನಡೆಸಿದರೆ, ಇನ್ನು ಕೆಲವು ಕೇಂದ್ರಗಳಲ್ಲಿ ಬಿಸಿಲಿನಿಂದ ಧಣಿದು ಬಂದವರಿಗೆ ಮಜ್ಜಿಗೆಯನ್ನು ವಿತರಿಸಲಾಯಿತು.

ಮತಯಂತ್ರಗಳು ಶಿವಮೊಗ್ಗಕ್ಕೆ ರವಾನೆ
ಸಂಜೆ ಆರು ಗಂಟೆ ಮತದಾನ ಪ್ರಕ್ರಿಯೆ ಮುಗಿದ ನಂತರ ಮತಯಂತ್ರ ಗಳನ್ನು ಡಿಮಸ್ಟರಿಂಗ್ ಕೇಂದ್ರವಾದ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ತರಲಾಗಿದ್ದು, ಈ ಪ್ರಕ್ರಿಯೆ ರಾತ್ರಿವರೆಗೂ ಮುಂದುವರೆದಿತ್ತು.

ರಾತ್ರಿ ಪರಿಶೀಲನೆ ನಡೆಸಿದ ಬಳಿಕ ಮತಯಂತ್ರಗಳನ್ನು ಮೂರು ಕಂಟೈನರ್ ಗಳಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ನೇತೃತ್ವದ ಭದ್ರತೆಯಲ್ಲಿ ಶಿವಮೊಗ್ಗಕ್ಕೆ ರವಾನಿಸಲಾಗುತ್ತದೆ. ತಡರಾತ್ರಿಯವರೆಗೂ ಪರಿಶೀಲನೆ ಕಾರ್ಯ ಮುಗಿಯದಿದ್ದರೆ ಎ.24ರ ಮುಂಜಾನೆ ಮತಯಂತ್ರಗಳನ್ನು ಸಾಗಿಸಲಾಗುತ್ತದೆ. ಇದರೊಂದಿಗೆ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕುಸುಮಾಧರ, ತಹಶೀಲ್ದಾರ್ ಬಸಪ್ಪ ಪೂಜಾರ್ ಹಾಗೂ ಇತರ ಅಧಿಕಾರಿಗಳು ಕೂಡ ತೆರಳಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ.

ಬಿಜೂರಿನಲ್ಲಿ ಮತದಾನ ಬಹಿಷ್ಕಾರ
 ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ ಹಿನ್ನೆಲೆಯಲ್ಲಿ ಬಿಜೂರು ವಾರ್ಡ್ ಮೂರು ಮತ್ತು ನಾಲ್ಕು ವಾರ್ಡ್‌ಗಳ ಚೆಮ್ಮನಿತ್ಲು ಹಾಗೂ ದೊಂಬ್ಲ ಕೆರೆಯ ಸುಮಾರು 100 ಮಂದಿ ಮತದಾನ ಬಹಿಷ್ಕರಿಸಿರುವ ಬಗ್ಗೆ ವರದಿ ಯಾಗಿದೆ.

ಮತದಾನ ಬಹಿಷ್ಕಾರದ ಪರಿಣಾಮ ಬಿಜೂರು ಸರಕಾರಿ ಪ್ರೌಢಶಾಲೆಯಲ್ಲಿ ರುವ ಮತಗಟ್ಟೆ ಸಂಖ್ಯೆ 66ರಲ್ಲಿ ಬೆಳಗ್ಗೆ 11ಗಂಟೆಯವರೆಗೆ ಕೇವಲ 4 ಮಂದಿ ಮಾತ್ರ ಮತದಾನ ಮಾಡಿದ್ದರು. ಸಂಜೆ ವೇಳೆ ಇಲ್ಲಿರುವ ಒಟ್ಟು 906 ಮತ ದಾರರ ಪೈಕಿ 614 ಮಂದಿ ಮತದಾನ ಮಾಡುವ ಮೂಲಕ ಶೇ.67ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News