×
Ad

ಕೈ ತಪ್ಪಿದ ಟಿಕೆಟ್: ಬಿಜೆಪಿ ತೊರೆಯುವುದಾಗಿ ಉದಿತ್ ರಾಜ್ ಎಚ್ಚರಿಕೆ

Update: 2019-04-23 20:46 IST

ಹೊಸದಿಲ್ಲಿ, ಎ.23: ಪಂಜಾಬ್‌ನ ಜನಪದ ಹಾಗೂ ಸೂಫಿ ಗಾಯಕ ಹನ್ಸ್ ರಾಜ್ ಹನ್ಸ್‌ರನ್ನು ವಾಯುವ್ಯ ದಿಲ್ಲಿ(ಎಸ್ಸಿ ಮೀಸಲು) ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದೆ. ಟಿಕೆಟ್ ಕೈತಪ್ಪಿರುವ ಹಾಲಿ ಸಂಸದ ಉದಿತ್ ರಾಜ್ ಬಿಜೆಪಿ ಮೈತ್ರಿಕೂಟದಿಂದ ಹೊರಬರುವುದಾಗಿ ಎಚ್ಚರಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಬಿಜೆಪಿ ಹನ್ಸ್‌ರಾಜ್ ಹೆಸರನ್ನು ಘೋಷಿಸಿದೆ. ಚಾಂದ್ನಿ ಚೌಕ್ ಕ್ಷೇತ್ರದಿಂದ ಹರ್ಷವರ್ಧನ್, ದಕ್ಷಿಣ ದಿಲ್ಲಿಯಿಂದ ರಮೇಶ್ ಬಿಧೂರಿ, ಪಶ್ಚಿಮ ದಿಲ್ಲಿಯಿಂದ ಪರ್ವೇಶ್ ವರ್ಮ, ಈಶಾನ್ಯ ದಿಲ್ಲಿಯಿಂದ ಮನೋಜ್ ತಿವಾರಿಗೆ ರವಿವಾರ ಬಿಜೆಪಿಯ ಟಿಕೆಟ್ ನೀಡಲಾಗಿದೆ.

ಸೋಮವಾರ ಹೊಸದಿಲ್ಲಿ ಕ್ಷೇತ್ರಕ್ಕೆ ಮೀನಾಕ್ಷಿ ಲೇಖಿ, ಪೂರ್ವ ದಿಲ್ಲಿ ಕ್ಷೇತ್ರಕ್ಕೆ ಕ್ರಿಕೆಟರ್ ಗೌತಮ್ ಗಂಭೀರ್ ಹೆಸರನ್ನು ಘೋಷಿಸಲಾಗಿದೆ. ಅಕಾಲಿ ದಳದ ಮೂಲಕ ತನ್ನ ರಾಜಕೀಯ ಪ್ರಯಾಣ ಆರಂಭಿಸಿರುವ ಹನ್ಸ್‌ರಾಜ್ ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಇದೀಗ ಬಿಜೆಪಿ ಸೇರಿದ್ದಾರೆ. ಇವರಿಗೆ ಕಾಂಗ್ರೆಸ್‌ನ ರಾಜೇಶ್ ಲಿಲೋಥಿಯಾ ಹಾಗೂ ಆಮ್ ಆದ್ಮಿ ಪಕ್ಷದ ಗಗನ್ ಸಿಂಗ್ ಎದುರಾಳಿಗಳಾಗಿದ್ದಾರೆ. ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸುವ ಮೂಲಕ ಹೆಸರಾದ ಉದಿತ್ ರಾಜ್ 2014ರಲ್ಲಿ ತನ್ನ ‘ಇಂಡಿಯನ್ ಜಸ್ಟಿಸ್ ಪಾರ್ಟಿ’ಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಆದರೂ ಅಖಿಲ ಭಾರತ ಎಸ್ಸಿ/ಎಸ್ಟಿ ಸಂಘಟನೆಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿದಿದ್ದರು.

 ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಉದಿತ್ ರಾಜ್, ಬಿಜೆಪಿ ತೊರೆಯುವುದಾಗಿ ಎಚ್ಚರಿಸಿದ್ದಾರೆ. ದಿಲ್ಲಿ ಪ್ರದೇಶ ಬಿಜೆಪಿ ಕಚೇರಿಯೆದುರು ರಾಜ್ ಬೆಂಬಲಿಗರು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ್ದಾರೆ. ಬಿಜೆಪಿ ಟಿಕೆಟ್ ನೀಡದೆ ವಂಚಿಸುತ್ತದೆ ಎಂದು ಈ ಮೊದಲೇ ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರೀವಾಲ್ ಎಚ್ಚರಿಸಿದ್ದರು. ಅದೀಗ ನಿಜವಾಗಿದೆ ಎಂದು ಉದಿತ್ ರಾಜ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News