ಬೈಂದೂರು: ನಕ್ಸಲ್ ಬಾಧಿತ ಸಹಿತ ಗ್ರಾಮೀಣ ಪ್ರದೇಶಗಳಲ್ಲಿ ಬಿರುಸಿನ ಮತದಾನ

Update: 2019-04-23 15:18 GMT

ಬೈಂದೂರು, ಎ.23: ಎರಡನೆ ಹಂತದ ಚುನಾವಣೆಯಲ್ಲಿ ಶಿವಮೊಗ್ಗ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯ ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾಕ್ಷೇತ್ರದ ನಕ್ಸಲ್ ಬಾಧಿತ ಪ್ರದೇಶಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಂಗಳವಾರ ಬಿರುಸಿನ ಮತದಾನ ನಡೆದಿದೆ.

ಬೈಂದೂರು ಕ್ಷೇತ್ರದ ಒಟ್ಟು ಮತಗಟ್ಟೆಗಳ ಪೈಕಿ ಸುಮಾರು 19 ಮತಗಟ್ಟೆ ಗಳು ನಕ್ಸಲ್ ಬಾಧಿತ ಪ್ರದೇಶಗಳಾದ ಶಂಕರನಾರಾಯಣ, ಯಡಮೊಗೆ, ಹಳ್ಳಿ ಹೊಳೆ, ಮಚ್ಚಟ್ಟು, ಹೊಸಂಗಡಿ, ಅಮಾಸೆಬೈಲು, ಮುದೂರು, ಜಡ್ಕಲ್ ಗ್ರಾಮಗಳ ವ್ಯಾಪ್ತಿಯಲ್ಲಿದ್ದು, ಇಲ್ಲಿ ಮಧ್ಯಾಹ್ನದವರೆಗೆ ಶೇ.45ರಿಂದ 50ರಷ್ಟು ಮತದಾನವಾಗಿದೆ.

ಬೈಂದೂರಿನಿಂದ ಸುಮಾರು 40-45 ಕಿ.ಮೀ. ದೂರದಲ್ಲಿರುವ ನಕ್ಸಲ್ ಬಾಧಿತ ಪ್ರದೇಶವಾಗಿರುವ ತೊಂಬಟ್ಟುವಿನಲ್ಲಿ ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದು, ಮತಗಟ್ಟೆಯಿಂದ ಸುಮಾರು ಐದಾರು ಕಿ.ಮೀ. ದೂರದ ಪ್ರದೇಶಗಳಿಂದ ವೃದ್ಧರು, ಮಹಿಳೆಯರು ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.

ಈ ಮತಗಟ್ಟೆಯಲ್ಲಿ ಬೆಳಗ್ಗೆ 11ಗಂಟೆಗೆ ಶೇ.42ಷ್ಟು ಮತದಾನ ನಡೆದಿ ರುವ ಬಗ್ಗೆ ವರದಿಯಾಗಿದೆ. ಸುಮಾರು ಒಂದೂವರೆ ಕಿ.ಮೀ. ದೂರದಿಂದ ಆಗಮಿಸಿರುವ 89ರ ಹರೆಯದ ಮುತ್ತು ಮತದಾನ ಮಾಡಿದ್ದು, ಈವರೆಗೆ ನಡೆದ ಎಲ್ಲ ಚುನಾವಣೆಯಲ್ಲಿ ಮತದಾನ ಮಾಡಿರುವುದಾಗಿ ಹೇಳಿಕೊಂಡರು. ನಕ್ಸಲ್ ಬಾಧಿತ ಪ್ರದೇಶಗಳಲ್ಲಿರುವ ಮತಗಟ್ಟೆಗಳಿಗೆ ಅರೆ ಸೇನಾ ಪಡೆಯ ಗೋವಾ ಆರ್ಮ್ಡ್ ಪೊಲೀಸರು, ನಕ್ಸಲ್ ನಿಗ್ರಹ ಪಡೆಗಳನ್ನು ನಿಯೋಜಿಸ ಲಾಗಿತ್ತು.

ಅಜ್ರಿಹರ ಶಾಲೆಯಲ್ಲಿರುವ ಎರಡು ಮತಗಟ್ಟೆಗಳಲ್ಲಿ ಸಾಕಷ್ಟು ಸಂಖ್ಯೆಯ ಮತದಾರರು ಉರಿ ಬಿಸಿಲನ್ನು ಲೆಕ್ಕಿಸದೆ ಸರತಿಯ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡುಬಂತು. ಇದರಲ್ಲಿ ಮಹಿಳೆಯರೇ ಬಹುಸಂಖ್ಯೆಯಲ್ಲಿ ದ್ದರು. ಹೀಗೆ ಗ್ರಾಮೀಣ ಪ್ರದೇಶದ ಮತದಾರರು ಬಹಳ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿರುವುದು ಕಂಡುಬಂತು. ಎಲ್ಲ ಕಡೆಗಳಲ್ಲಿ ಹಿರಿಯ ಮಹಿಳೆಯರು, ನಡೆಯಲು ಸಾಧ್ಯವಾಗದ ವೃದ್ಧೆಯರು ಇತರರ ಸಹಾಯ ದಿಂದ ಮತಟ್ಟೆ ಆಗಮಿಸಿ ಮತ ಚಲಾಯಿಸಿದರು.

ಡಿಸಿ, ಎಸ್ಪಿಯಿಂದ ಕ್ಷೇತ್ರಾದ್ಯಂತ ಮಿಂಚಿನ ಸಂಚಾರ

ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಬೈಂದೂರು ಕ್ಷೇತ್ರದ್ಯಾಂತ ಸಂಚರಿಸಿ ಮತದಾನ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಿದರು. ಅದೇ ರೀತಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಕೂಡ ಕ್ಷೇತ್ರಕ್ಕೆ ಭೇಟಿ ನೀಡಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ನಕ್ಸಲ್ ಬಾಧಿತ ಪ್ರದೇಶ ಗಳಾದ ತೊಂಬಟ್ಟು, ಮಚ್ಚಟ್ಟು, ಶಂಕರನಾರಾಯಣ ಮತಗಟ್ಟೆಗಳಿಗೆ ಭೇಟಿ ನೀಡಿ ಭದ್ರತೆಯನ್ನು ಅವಲೋಕಿಸಿದರು. ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ಬೈಂದೂರು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕುಸುಮಾಧರ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಮಸ್ಟರಿಂಗ್ ಸೆಂಟರ್‌ನಲ್ಲಿ ಮೊಕ್ಕಾಂ ಹೂಡಿ ಮತದಾನ ಪ್ರಕ್ರಿಯೆ ಬಗ್ಗೆ ನಿಗಾ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News