ಉಡುಪಿ ಜಿಲ್ಲೆಯಾದ್ಯಂತ ಧೂಳು, ಬಿರುಗಾಳಿ ಸಹಿತ ಮಳೆ

Update: 2019-04-23 16:19 GMT

ಉಡುಪಿ, ಎ. 23: ಜಿಲ್ಲೆಯಾದ್ಯಂತ ಇಂದು ಸಂಜೆ ಬೀಸಿದ ಅನಿರೀಕ್ಷಿತ ಬಿರುಗಾಳಿಯಿಂದ ಇಡೀ ಪರಿಸರ ಧೂಳುಮಯವಾಗಿದ್ದು, ಇದರ ಪರಿಣಾಮ ಹಲವು ಕಡೆಗಳಲ್ಲಿ ಮರ, ವಿದ್ಯುತ್ ಕಂಬಗಳು, ಅಂಗಡಿಯ ನಾಮಫಲಕಗಳು ಧೆಗೆ ಉರುಳಿರುವ ಬಗ್ಗೆ ವರದಿಯಾಗಿದೆ.

ಉಡುಪಿ ನಗರ, ಮಲ್ಪೆ, ಮಣಿಪಾಲ, ಬ್ರಹ್ಮಾವರ, ಕಾಪು, ಪಡುಬಿದ್ರೆ, ಹೆಬ್ರಿ, ಮುನಿಯಾಲು ಸೇರಿದಂತೆ ವಿವಿಧೆಡೆ ಬೀಸಿದ ಭಾರೀ ಗಾಳಿಯಿಂದ ಅಪಾರ ನಷ್ಟ ಸಂಭವಿಸಿದೆ. ಇದರಿಂದ ಎಲ್ಲೆಡೆ ಎದ್ದ ಧೂಳಿನಿಂದ ಸಾರ್ವ ಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಬಳಿಕ ಸುರಿದ ಗುಡುಗು ಸಹಿತ ಮಳೆ ಬಿಸಿಲ ಧಗೆಯಿಂದ ಕಂಗೆಟ್ಟ ಜಿಲ್ಲೆಗೆ ತಂಪೆರೆದವು.

ಉದ್ಯಾವರದಲ್ಲಿ ಮಳೆ ಬರುತ್ತಿದ್ದ ವೇಳೆ ಮನೆಯ ಹೊರಗಡೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತೆಗೆಯಲು ಹೋದ ಮಹಿಳೆಯ ಮೇಲೆ ತೆಂಗಿನ ಮರದ ಮಡಲು ಬಿದ್ದು ತೀವ್ರವಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ. ಮಹಿಳೆ ಯನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲ ಗಳು ತಿಳಿಸಿವೆ.

ಉಡುಪಿ ನಗರದಲ್ಲಿ ಬೀಸಿದ ಭಾರೀ ಗಾಳಿ ಹಾಗೂ ಅನಿರೀಕ್ಷಿತ ಮಳೆ ಯಿಂದ ಜನ ಪರದಾಡುವಂತಾಯಿತು. ಚಿಟ್ಪಾಡಿಯಲ್ಲಿ ವಿದ್ಯುತ್ ಕಂಬಕ್ಕೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ ನಗರದ ಅಂಗಡಿಗಳ ನಾಮ ಫಲಕಗಳಿಗೆ ಹಾನಿಯಾಗಿದೆ. ಕುಂದಾಪುರದಲ್ಲಿ ಗಾಳಿಯೊಂದಿಗೆ ತುಂತುರು ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಹೆಬ್ರಿ ಸಮೀಪದ ಮುದ್ರಾಡಿಯಲ್ಲಿ ಗಾಳಿಮಳೆಗೆ ಗ್ರಾಪಂ ಸಂತೆ ಮಾರುಕಟ್ಟೆ ಮೇಲೆ ಮರ ಬಿದ್ದ ಪರಿಣಾಮ ಮೇಲ್ಛಾವಣಿಗೆ ಹಾನಿ ಉಂಟಾಗಿದೆ. ಅದೇ ರೀತಿ ಮುನಿಯಾಲು -ವರಂಗ ರಸ್ತೆಯಲ್ಲಿ ಮರಗಳು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿದವು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆವುಗೊಳಿಸುವ ಕಾರ್ಯ ನಡೆಸಿದರು.

ಹೆಬ್ರಿ, ಮುನಿಯಾಲು ಪರಿಸರದಲ್ಲಿ ಗಾಳಿಯಿಂದ ಹಲವು ವಿದ್ಯುತ್ ಕಂಬ ಗಳು ಧರೆಗೆ ಉರುಳಿದವು. ಹಲವು ಮನೆಗಳ ಹೆಂಚು, ಶೀಟುಗಳು ಗಾಳಿಗೆ ಹಾರಿ ಅಪಾರ ನಷ್ಟ ಸಂಭವಿಸಿದೆ. ಮುನಿಯಾಲು ಕಾಲೇಜಿನ ಕಂಪೌಂಡ್ ಗೋಡೆ ಕುಸಿದು ಬಿದ್ದಿರುವುದಾಗಿ ತಿಳಿದುಬಂದಿದೆ.

ಕಾಪು ಪುರಸಭಾ ವ್ಯಾಪ್ತಿಯ ಉಳಿಯಾರಗೋಳಿ ಕೇಂದ್ರಿತವಾಗಿ ಸಂಜೆ ಭಾರೀ ಗಾಳಿ ಬೀಸಿದ್ದು, ಕಾಪು ಪೇಟೆಯ ಹಲವು ಅಂಗಡಿ ಹಾಗೂ ಕಚೇರಿಗಳ ನಾಮ ಫಲಕಗಳು ಕೆಳಗೆ ಬಿದ್ದು ಹಾನಿಯಾಗಿವೆ. ಪೇಟೆಯಲ್ಲಿದ್ದ ವ್ಯಾಪಾರಿಗಳ ಮಳಿಗೆಗಳಿಗೂ ತೊಂದರೆಯಾಗಿದೆ. ಗಾಳಿಯಿಂದ ಇಡೀ ಕಾಪು ಧೂಳುಮಯ ವಾಗಿರುವುದು ಕಂಡುಬಂತು. ಇದೇ ವೇಳೆ ಗುಡುಗು ಮಿಂಚು ಸಹಿತ ಮಳೆ ಸುರಿಯಿತು. ಅದೇ ರೀತಿ ಪಡುಬಿದ್ರಿಯಲ್ಲೂ ಗಾಳಿ ಜೊತೆ ಮಳೆಯ ಸಿಂಚನ ವಾಯಿತು. ಗಾಳಿಯಿಂದಾಗಿ ಪೇಟೆಯ ಅಂಗಡಿಗಳಿಗೆ ಹಾಗೂ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News