ಗೋವಾ ಸಮುದ್ರದಲ್ಲಿ ಮಲ್ಪೆಯ ಬೋಟು ಮುಳುಗಡೆ: 7 ಮಂದಿ ಮೀನುಗಾರರ ರಕ್ಷಣೆ; 80 ಲಕ್ಷ ರೂ. ನಷ್ಟ

Update: 2019-04-23 16:22 GMT

ಮಲ್ಪೆ, ಎ.23: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟು ಗೋವಾ ರಾಜ್ಯದ ಮಾಲ್ವನ್ ಸಮೀಪದ ಸಮುದ್ರದಲ್ಲಿ ಮುಳು ಗಡೆಯಾಗಿದ್ದು, ಅದರಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಿರುವ ಘಟನೆ ಮಂಗಳವಾರ ಮಧ್ಯಾಹ್ನ ವೇಳೆ ನಡೆದಿದೆ.

ಮಲ್ಪೆಯ ರೋಶಿನಿ ಎಸ್.ಕುಂದರ್ ಎಂಬವರ ‘ಶ್ರೀ ಸಾಯಿಸಿದ್ದಿ’ ಹೆಸರಿನ ಆಳಸಮುದ್ರ ಸ್ಟೀಲ್‌ಬೋಟ್ ಎ.16ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟಿತ್ತು. ಬೋಟು ಗೋವಾ ರಾಜ್ಯದ ಮಾಲ್ವಾನ್ ಸಮೀಪ ಸುಮಾರು 40 ಮೀಟರ್ ಅಳದೂರದಲ್ಲಿ ಮೀನುಗಾರಿಕೆ ನಡೆಸುತ್ತಿ ದ್ದಾಗ ಬೋಟಿನ ಅಡಿಭಾಗಕ್ಕೆ ವಸ್ತುವೊಂದು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರ ಪರಿಣಾಮ ಸಮುದ್ರದ ನೀರು ಬೋಟಿನೊಳಗೆ ನುಗ್ಗಲು ಪ್ರಾರಂಭಿ ಸಿತು. ಇದರಿಂದ ಬೋಟಿನ ಎಂಜಿನ್ ಸ್ಥಗಿತಗೊಂಡಿತ್ತು. ಈ ವೇಳೆ ಬೋಟಿ ನಲ್ಲಿದ್ದ ಮೀನುಗಾರರು ಸಮೀಪದ ವಾಯುಪುತ್ರ ಮತ್ತು ಶುಭಾಶಯ ಎಂಬ ಬೋಟ್‌ಗಳಿಗೆ ಮಾಹಿತಿ ರವಾನಿಸಿದರು.

ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಎರಡು ಬೋಟಿನ ಮೀನುಗಾರರು, ಮುಳುಗಡೆ ಯಾಗುತ್ತಿದ್ದ ಬೋಟ್‌ನಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಾದ ನಾಗರಾಜ್, ಹೊನ್ನಪ್ಪ ಗಣಪತಿ, ಮಂಜು, ರಾಮ, ಸದಾಶಿವ, ಪಾಂಡು ಎಂಬವರನ್ನು ರಕ್ಷಿಸಿದರು.

ಮುಳುಗಡೆಯಾಗುತ್ತಿದ್ದ ‘ಶ್ರೀ ಸಾಯಿಸಿದ್ದಿ’ ಬೋಟನ್ನು ಉಳಿದ ಎರಡು ಬೋಟಿನವರು ಎಳೆದು ತರಲು ಪ್ರಯತ್ನ ಮಾಡಿದರು. ಆದರೆ ಅದು ಸಾಧ್ಯ ವಾಗದೆ ಬೋಟು ಸಂಪೂರ್ಣ ಮುಳುಗಡೆಗೊಂಡಿತ್ತೆಂದು ತಿಳಿದು ಬಂದಿದೆ. ಬೋಟನಲ್ಲಿದ್ದ 8ಸಾವಿರ ಲೀಟರ್ ಡಿಸೇಲ್, ಬಲೆ, ಹಿಡಿದ ಮೀನುಗಳು ಸೇರಿದಂತೆ ಒಟ್ಟು 80ಲಕ್ಷ ರೂ. ನಷ್ಟ ಉಂಟಾಗಿದೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News