ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಆರೋಪ: ಮೂವರು ನ್ಯಾಯಮೂರ್ತಿಗಳಿಂದ ತನಿಖೆ

Update: 2019-04-24 03:35 GMT

ಹೊಸದಿಲ್ಲಿ, ಎ.24: ದೇಶದ ಇತಿಹಾಸದಲ್ಲೇ ಮೊದಲ ಬಾರಿ ಭಾರತದ ಮುಖ್ಯನ್ಯಾಯಮೂರ್ತಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಮೂವರು ನ್ಯಾಯಮೂರ್ತಿಗಳ ಸಮಿತಿ ತನಿಖೆ ನಡೆಸಲಿದೆ.

ಸಿಜೆಐ ಅವರ ಕಿರಿಯ ನ್ಯಾಯಾಲಯ ಸಹಾಯಕಿ ಈ ಆರೋಪ ಮಾಡಿದ್ದು, ಇದನ್ನು ಬಲವಾಗಿ ಅಲ್ಲಗಳೆದಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ಇದರ ಹಿಂದೆ ದೊಡ್ಡ ಶಕ್ತಿಗಳ ಕೈವಾಡವಿದೆ ಎಂದು ಆಪಾದಿಸಿದ್ದರು.

ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ತನಿಖಾ ಸಮಿತಿಯಲ್ಲಿ ನ್ಯಾಯಮೂರ್ತಿಗಳಾದ ಎನ್.ವಿ.ರಮಣ ಮತ್ತು ಇಂದಿರಾ ಬ್ಯಾನರ್ಜಿ ಇದ್ದಾರೆ. ಎಲ್ಲ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಹಾಜರಿದ್ದ ಸಭೆ, ಈ ಸಮಿತಿ ನೇಮಕವನ್ನು ಅನುಮೋದಿಸಿದೆ. ಮಂಗಳವಾರ ಈ ಸಮಿತಿ ದೂರುದಾರರಿಗೆ ಹಾಗೂ ಸುಪ್ರೀಂಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಸಂಜೀವ್ ಕಲಗಾಂವ್ಕರ್ ಅವರಿಗೆ ನೋಟಿಸ್ ನೀಡಿದ್ದು, ಶುಕ್ರವಾರ ನಡೆಯುವ ಮೊದಲ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ವಜಾಗೊಂಡ ಈ ಉದ್ಯೋಗಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹಾಜರುಪಡಿಸುವಂತೆ ಕಲಗಾಂವ್ಕರ್ ಅವರಿಗೆ ಸೂಚಿಸಲಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಈ ಮಹಿಳೆಯನ್ನು ಎಲ್ಲೆಲ್ಲಿ ನಿಯೋಜಿಸಲಾಗಿತ್ತು ಎಂಬ ಬಗ್ಗೆಯೂ ದಾಖಲೆ ಸಲ್ಲಿಸುವಂತೆ ಆದೇಶಿಸಲಾಗಿದೆ. ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ ವಿವಾದ ಉದ್ಭವಿಸಿರುವ ಹಿನ್ನೆಲೆಯಲ್ಲಿ ಅದನ್ನು ಬಗೆಹರಿಸಲು ನ್ಯಾಯಮೂರ್ತಿಗಳ ಸಮಿತಿಯನ್ನು ನೇಮಕ ಮಾಡುವ ಅಗತ್ಯತೆಯನ್ನು ಸಭೆ ಸರ್ವಾನುಮತದಿಂದ ಅನುಮೋದಿಸಿತು.

ದೇಶದ 69 ವರ್ಷಗಳ ಸುಪ್ರೀಂಕೋರ್ಟ್ ಇತಿಹಾಸದಲ್ಲೇ, ನ್ಯಾಯ ವ್ಯವಸ್ಥೆಯ ಅತ್ಯುನ್ನತ ಹುದ್ದೆಯಲ್ಲಿರುವವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದಿರುವುದು ಮತ್ತು ಮೂವರು ನ್ಯಾಯಮೂರ್ತಿಗಳ ಸಮಿತಿ ಈ ಬಗ್ಗೆ ತನಿಖೆ ನಡೆಸುತ್ತಿರುವುದು ಇದೇ ಮೊದಲು. ಸೇವಾ ಜ್ಯೇಷ್ಠತೆಯಲ್ಲಿ ಸಿಜೆಐ ಗೊಗೊಯಿ ನಂತರದ ಸ್ಥಾನದಲ್ಲಿರುವ ನ್ಯಾಯಮೂರ್ತಿ ಬೋಬ್ಡೆಯವರು ಈ ವರ್ಷದ ನವೆಂಬರ್ 18ರಂದು ಗೊಗೊಯಿ ಅಧಿಕಾರಾವಧಿ ಮುಗಿದ ಬಳಿಕ ಸಿಜೆಐ ಆಗುವ ನಿರೀಕ್ಷೆ ಇದೆ. ನ್ಯಾಯಮೂರ್ತಿ ಬೋಬ್ಡೆ 2021ರ ಎಪ್ರಿಲ್ 24ರಂದು ನಿವೃತ್ತರಾಗುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News