ಮತದಾನದ ಬಳಿಕ ಮೋದಿ ರೋಡ್ ಶೋ: ವರದಿ ಕೇಳಿದ ಆಯೋಗ

Update: 2019-04-24 03:41 GMT

ಹೊಸದಿಲ್ಲಿ, ಎ.24: ಅಹ್ಮದಾಬಾದ್‌ನಲ್ಲಿ ಮಂಗಳವಾರ ಮತದಾನ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗ, ಗುಜರಾತ್‌ನ ಮುಖ್ಯ ಚುನಾವಣಾ ಅಧಿಕಾರಿಯಿಂದ ವರದಿ ಕೇಳಿದೆ.

ಮತದಾನ ಮಾಡಿದ ಬಳಿಕ ರೋಡ್‌ಶೋ ನಡೆಸುವ ಮೂಲಕ ಪ್ರಧಾನಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಪ್ರಧಾನಿಯ ದೊಡ್ಡ ಮೆರವಣಿಗೆ ಮತ್ತು ಆ ಬಳಿಕ ಮೋದಿ ಭಾಷಣ ಮಾಡಿರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಈ ಹಿನ್ನೆಲೆಯಲ್ಲಿ 48-72 ಗಂಟೆಗಳ ಪ್ರಚಾರ ನಿರ್ಬಂಧವನ್ನು ಹೇರಬೇಕು ಎಂದು ಚುನಾವಣಾ ಆಯೋಗವನ್ನು ಕೋರಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಸಾಂಘ್ವಿ ವಿವರಿಸಿದ್ದಾರೆ.

ಮತ ಚಲಾಯಿಸಿದ ಬಳಿಕ ಮೋದಿ ತೆರೆದ ಜೀಪ್‌ನಲ್ಲಿ ಪ್ರಯಾಣಿಸಿದ್ದಲ್ಲದೇ ಬಳಿಕ ರಸ್ತೆಯಲ್ಲಿ ನಡೆದುಕೊಂಡು ಬಂದು ಅಹ್ಮದಾಬಾದ್ ಜನತೆಯ ಜತೆ ಸಂವಾದ ನಡೆಸಿದ್ದರು.

ಶಾ ಪ್ರಕರಣದ ತನಿಖೆ: ಪುಲ್ವಾಮಾ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ತಮ್ಮ ವಾಯುಪಡೆಯನ್ನು ಕಳುಹಿಸಿದ್ದರು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿರುವ ಬಗ್ಗೆಯೂ ಆಯೋಗ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ. ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುವ ವೇಳೆ ಶಾ ಈ ಹೇಳಿಕೆ ನೀಡಿದ್ದರು.

"ಇದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ವಿವರ ಸಂಗ್ರಹಿಸಲಾಗುತ್ತಿದೆ. ವಿವರ ಪಡೆದ ಬಳಿಕ ಪರಿಶೀಲಿಸಲಾಗುತ್ತದೆ" ಎಂದು ಉಪ ಚುನಾವಣಾ ಆಯುಕ್ತ ಸಂದೀಪ್ ಸಕ್ಸೇನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News