​ಕೊನೆಕ್ಷಣದ ವರೆಗೂ ಆಪ್ ಜತೆ ಮೈತ್ರಿಗೆ ಸಿದ್ಧ: ರಾಹುಲ್

Update: 2019-04-24 03:58 GMT

ಹೊಸದಿಲ್ಲಿ, ಎ.24: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್- ಆಮ್ ಆದ್ಮಿ ಪಕ್ಷದ ಮೈತ್ರಿಯನ್ನು ಹರ್ಯಾಣಕ್ಕೂ ವಿಸ್ತರಿಸಬೇಕು ಎಂಬ ಶರತ್ತು ಸಡಿಲಿಸಿದರೆ ಕೊನೆ ಕ್ಷಣದಲ್ಲಿ ಕೂಡಾ ಆ ಪಕ್ಷದ ಜತೆ ದಿಲ್ಲಿಯಲ್ಲಿ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಕಟಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಮೈತ್ರಿ ಬಯಸಿದೆ ಎಂಬ ಸೋಗು ಹಾಕುತ್ತಿದೆ. ರಾಹುಲ್‌ ಗಾಂಧಿಯವರಿಗೆ ಈ ವಿಚಾರದಲ್ಲಿ ಆಸಕ್ತಿ ಇಲ್ಲ ಎಂದು ದಿಲ್ಲಿ ಸಿಎಂ ಆರೋಪಿಸಿದ್ದರು. ನವಭಾರತ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ನಾಮಪತ್ರ ವಾಪಸ್ ಪಡೆಯುವ ಗಡುವಿನ ಹಂತದಲ್ಲಿ ಕೊನೆಕ್ಷಣದಲ್ಲಿ ಮೈತ್ರಿ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದಾಗ ರಾಹುಲ್‌ ಗಾಂಧಿ, "ನಾವು ಕೊನೆ ಸೆಕೆಂಡ್ ವರೆಗೂ ಮೈತ್ರಿಗೆ ಸಿದ್ಧರಿದ್ದೇವೆ. ಹರ್ಯಾಣವನ್ನು ಕೂಡಾ ಮೈತ್ರಿ ವ್ಯಾಪ್ತಿಗೆ ಒಳಪಡಿಸಬೇಕು ಎಂಬ ಶರತ್ತನ್ನು ಕೇಜ್ರಿವಾಲ್ ಕೈಬಿಟ್ಟ ತಕ್ಷಣ ಅದು ಸಾಧ್ಯವಾಗುತ್ತದೆ" ಎಂದು ಉತ್ತರಿಸಿದರು.

ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ ನಾಲ್ಕು ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಸ್ಪರ್ಧಿಸುವ ಪ್ರಸ್ತಾವವನ್ನು ಕೇಜ್ರಿವಾಲ್ ಅವರೇ ಮುಂದಿಟ್ಟಿದ್ದಾರೆ ಎಂದು ರಾಹುಲ್ ಸ್ಪಷ್ಟಪಡಿಸಿದರು.

ಮೊದಲು ನಮ್ಮ ಪಕ್ಷದ ದಿಲ್ಲಿ ಮುಖಂಡರು ಇದಕ್ಕೆ ಒಪ್ಪಿರಲಿಲ್ಲ. ಆದರೆ ಅವರ ಮನವೊಲಿಸಿದ ಬಳಿಕ ಕೇಜ್ರಿವಾಲ್, ಹರ್ಯಾಣವನ್ನೂ ಸೇರಿಸಬೇಕು ಎಂಬ ಶರತ್ತು ಮುಂದಿಟ್ಟರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News