ಬಿಜೆಪಿಯಿಂದ 'ಗೋವಧೆ': ಕೇಂದ್ರ ಸಚಿವ ಆಕ್ರೋಶ

Update: 2019-04-24 04:05 GMT

ಚಂಡೀಗಢ, ಎ.24: ಪಂಜಾಬ್‌ನ ಹೊಶಿಯಾರ್‌ಪುರ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿರುವ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ವಿಜಯ್ ಸಾಂಪ್ಲಾ, 'ಬಿಜೆಪಿ ಗೋವಧೆ' ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಕ್ಷೇತ್ರದಿಂದ ಬಿಜೆಪಿ ಸಾಂಪ್ಲಾ ಅವರಿಗೆ ಟಿಕೆಟ್ ನಿರಾಕರಿಸಿ ಫಗ್ವಾರಾ ಶಾಸಕ ಸೋಮ್‌ಪ್ರಕಾಶ್ ಅವರನ್ನು ಕಣಕ್ಕೆ ಇಳಿಸಿದೆ. ಟಿಕೆಟ್ ವಂಚಿತರಾದ ಸಾಂಪ್ಲಾ ಸರಣಿ ಟ್ವೀಟ್ ಮೂಲಕ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. "ತೀರಾ ಬೇಸರವಾಗಿದೆ; ಬಿಜೆಪಿ ಗೋವಧೆ ಮಾಡಿದೆ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ದಲಿತ ವರ್ಗಕ್ಕೆ ಸೇರಿದ ಈ ಹಿರಿಯ ಮುಖಂಡ, ತಮ್ಮ ಸ್ವಚ್ಛ ಚಾರಿತ್ರ್ಯವನ್ನು ಪ್ರತಿಪಾದಿಸಿದ್ದು, ನಾನು ಮಾಡಿದ ತಪ್ಪೇನು ಹಾಗೂ ಏಕೆ ಟಿಕೆಟ್ ನಿರಾಕರಿಸಿದೆ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. "ನೀವು ನನ್ನ ತಪ್ಪನ್ನು ಗುರುತಿಸಿರಬೇಕು? ನನ್ನಿಂದ ಯಾವ ತಪ್ಪಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

"ನನ್ನ ಬಗ್ಗೆ ಭ್ರಷ್ಟಾಚಾರದ ಆರೋಪಗಳಿಲ್ಲ; ನನ್ನ ನಡತೆ ಬಗ್ಗೆಯೂ ಯಾರೂ ಬೆರಳು ತೋರುವಂತಿಲ್ಲ" ಎಂದು ಹೇಳಿದ್ದಾರೆ.

ತಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ವಿವರ ನೀಡಿದ ಅವರು, "ನಾನು ಈ ಪ್ರದೇಶಕ್ಕೆ ವಿಮಾನ ನಿಲ್ದಾಣ ಮಂಜೂರು ಮಾಡಿಸಿಕೊಂಡಿದ್ದೇನೆ. ಹೊಸ ರೈಲು ಹಾಗೂ ಹೊಸ ರಸ್ತೆಗಳನ್ನು ಮಂಜೂರು ಮಾಡಿಸಿಕೊಂಡಿದ್ದೇನೆ" ಎಂದು ಟ್ವೀಟಿಸಿದ್ದಾರೆ.

"ಇದು ನನ್ನ ತಪ್ಪು ಎಂದಾದಲ್ಲಿ ಹೇಳಿ; ಮುಂದಿನ ಪೀಳಿಗೆ ಈ ಪ್ರಮಾದವನ್ನು ಮತ್ತೆ ಮಾಡದಿರಲಿ" ಎಂದು ಬಿಜೆಪಿ ನಾಯಕತ್ವಕ್ಕೆ ಸೆಡ್ಡು ಹೊಡೆದಿದ್ದಾರೆ. ಈ ಹಿಂದೆ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿದ್ದ ಚೌಕಿದಾರ್ ಎಂಬ ಪದವನ್ನೂ ಸಾಂಪ್ಲಾ ಕಿತ್ತುಹಾಕಿದ್ದಾರೆ. ಸಾಂಪ್ಲಾ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News