ಮಮತಾ ಬ್ಯಾನರ್ಜಿ ನನಗೆ ಈಗಲೂ ಪ್ರತಿವರ್ಷ ಕುರ್ತಾ ಕಳುಹಿಸಿಕೊಡುತ್ತಾರೆ:ಮೋದಿ

Update: 2019-04-24 05:42 GMT

ಹೊಸದಿಲ್ಲಿ, ಎ.24: ರಾಜಕೀಯ ವಿರೋಧಿಗಳೊಂದಿಗೆ ಅದರಲ್ಲೂ ಮುಖ್ಯವಾಗಿ ಮಮತಾ ಬ್ಯಾನರ್ಜಿ ಹಾಗೂ ಗುಲಾಂ ನಬಿ ಆಝಾದ್‌ರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಹೀಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿ ವರ್ಷ ನನಗೆ ಉಡುಗೊರೆಯಾಗಿ ಕುರ್ತಾ ಕಳುಹಿಸಿಕೊಡುತ್ತಾರೆ. ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸೀನಾ ನನಗೆ ಸ್ವೀಟ್ ಕಳುಹಿಕೊಡುತ್ತಾರೆ. ಇದನ್ನು ಗಮನಿಸಿದ ಮಮತಾ ಕೂಡ ನನಗೆ ಸ್ವೀಟ್ ಕಳುಹಿಸಿಕೊಡಲು ಆರಂಭಿಸಿದರು. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್‌ರೊಂದಿಗೆ ಕೂಡ ಉತ್ತಮ ಒಡನಾಟವಿದೆ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್‌ರೊಂದಿಗೆ ನಡೆಸಿದ ರಾಜಕೀಯೇತರ ಸಂವಾದದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ನೀವು ಏಕೆ ದಿನಕ್ಕೆ ಮೂರೂವರೆ ಗಂಟೆ ಮಾತ್ರ ನಿದ್ದೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ನೀವು ಹೆಚ್ಚು ನಿದ್ದೆ ಮಾಡಿ ಎಂದು ಸಲಹೆ ನೀಡಿದ್ದರು. ಆದರೆ, ಆದರೆ ನನಗೆ 3-4 ಗಂಟೆಗಿಂತ ಹೆಚ್ಚು ನಿದ್ದೆಯೇ ಬರುವುದಿಲ್ಲ. ರಾಜಕೀಯ ನಿವೃತ್ತಿಯ ಬಳಿಕ ಇಡೀ ದಿನ ಮಲಗಬೇಕೆಂದು ನಿರ್ಧರಿಸಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

1962ರ ಯುದ್ಧದ ವೇಳೆ ನಮ್ಮ ಸೈನಿಕರು ಗುಜರಾತ್‌ನ ಮೆಹ್ಸಾನಾ ರೈಲ್ವೆ ಸ್ಟೇಶನ್‌ನಲ್ಲಿ ರೈಲಲ್ಲಿ ತೆರಳುತ್ತಿದ್ದನ್ನು ನೋಡಿದ್ದೆೆ. ಆಗ ಸೈನಿಕರಿಂದ ನಾನು ಪ್ರಭಾವಿತನಾಗಿದ್ದೆ. ಅವರ ತ್ಯಾಗಮಯ ಜೀವನ ನನ್ನ ಮೇಲೆ ಪ್ರಭಾವಬೀರಿದೆ ಎಂದರು.

 ನಾನು ಟ್ವಟರ್‌ನ್ನು ಹಿಂಬಾಲಿಸುವುದಿಲ್ಲ. ಆದರೆ, ಅದರಲ್ಲಿ ಬರುವ ಮೆಮ್ಸ್‌ನ್ನು ನೋಡಿ ಆನಂದಿಸುವೆ. ಅದರಲ್ಲಿನ ಸೃಜನಶೀಲನೆ ನನಗೆ ಇಷ್ಟವಾಗುತ್ತದೆ. ಸಾಮಾಜಿಕ ಜಾಲತಾಣವು ಸಾಮಾನ್ಯ ಜನರ ಮನಸ್ಥಿತಿ ತಿಳಿಯಲು ನೆರವಾಗುತ್ತದೆ ಎಂದರು.

ರಾಜಕೀಯ ನಿವೃತ್ತಿಯ ಬಳಿಕ ಏನು ಮಾಡಬೇಕೆಂದು ಇನ್ನೂ ಯೋಚಿಸಿಲ್ಲ. ನಾನು ಯವಾಗಲೂ ಕೆಲಸವನ್ನು ಹಾಗೂ ಹೊಣೆಗಾರಿಕೆಯನ್ನು ಇಷ್ಟಪಡುತ್ತೇನೆ. ಸ್ವಯಂ ಗುರಿ ಇಟ್ಟುಕೊಂಡಿದ್ದೇನೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂವಾದದ ವೇಳೆ ದೇವೇಗೌಡರ ಹೆಸರನ್ನು ಉಲ್ಲೇಖಿಸಿದ ಪ್ರಧಾನಿ,‘‘ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಪ್ರಧಾನಿಮಂತ್ರಿ ಆಗಿದ್ದರು. ಆದರೆ ಅವರು ಅಲ್ಪ ಅವಧಿಗೆ ಪ್ರಧಾನಿಯಾಗಿದ್ದರು. ಗುಜರಾತ್‌ನ ಮುಖ್ಯಮಂತ್ರಿಯಾಗಿ ದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ್ದ ನನಗೆ 5 ವರ್ಷ ಪ್ರಧಾನಿಯಾಗುವ ಯೋಗ ಲಭಿಸಿತ್ತು. ಪ್ರಧಾನಿಯಾಗುತ್ತೇನೆಂದು ಯೋಚಿಸಿರಲಿಲ್ಲ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News