ಎತ್ತಿನಹೊಳೆ ಯೋಜನೆ ಕೈಬಿಡಲು ಧರಣಿ ನಡೆಸಿ: ಜಿಲ್ಲೆಯ ಸಚಿವ, ಶಾಸಕರಿಗೆ ಪರಿಸರ ಪ್ರೇಮಿಗಳ ಒತ್ತಾಯ

Update: 2019-04-24 07:39 GMT

ಮಂಗಳೂರು, ಎ.24: ದ.ಕ. ಜಿಲ್ಲೆಯಲ್ಲಿ ಈಗಾಗಲೇ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯು ಬರದ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಎತ್ತಿನಹೊಳೆ ಯೋಜನೆಯಲ್ಲಿ ಬರಡು ಭೂಮಿಗೆ ನೀರು ಹರಿಸುವುದಾದರೂ ಹೇಗೆ? ಎಂಬುದನ್ನು ಮನವರಿಕೆ ಮಾಡಿಕೊಂಡು ಜಿಲ್ಲೆಯ ಸಚಿವರು ಹಾಗೂ ಶಾಸಕರು ಎತ್ತಿನಹೊಳೆ ಯೋಜನೆ ಕೈಬಿಡಲು ವಿಧಾನಸಭೆಯಲ್ಲಿ ಧರಣಿ ನಡೆಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಸಹ್ಯಾದ್ರಿ ಸಂಚಯ ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ವತಿಯಿಂದ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ, ಎತ್ತಿನಹೊಳೆ ಯೋಜನೆಯನ್ನು ಸರಕಾರ ಕೈಬಿಡುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹೋರಾಟ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅವರು ಹೋದಲ್ಲೆಲ್ಲಾ ಕಪ್ಪು ಬಾವುಟ ಪ್ರದರ್ಶನದ ಮೂಲಕ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಎಚ್ಚರಿಸಿದರು.

ಕಳೆದ ಬಾರಿ ದ.ಕ. ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಲಾಗಿತ್ತು. ಇಂತಹ ಬರಪೀಡಿತ ಜಿಲ್ಲೆಯಿಂದ ಬರಪೀಡಿತ ಜಿಲ್ಲೆಗಳಿಗೆ ನೀರು ಹಾಯಿಸುವುದೆಂದರೆ ಏನರ್ಥ? ಜನಪ್ರತಿನಿಧಿಗಳು ಈ ವಿಷಯವನ್ನು ಮನವರಿಕೆ ಮಾಡಿಕೊಳ್ಳಬೇಕು. ಯೋಜನೆಗೆ ಸಂಬಂಧಿಸಿ ಒಬ್ಬರನ್ನೊಬ್ಬರು ದೂಷಿಸುವುದನ್ನು ಬಿಟ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಶಾಸಕರು ಹಾಗೂ ಸಚಿವರು ಈ ಹಿಂದೆಲ್ಲಾ ಇಲ್ಲದ ನೀರಿನ ಕೊರತೆ, ಬರದ ಸ್ಥಿತಿ ಕಳೆದ ನಾಲ್ಕೈದು ವರ್ಷಗಳಲ್ಲಿ ತೀವ್ರಗೊಂಡಿರುವುದೇಕೆ ಎಂಬ ಬಗ್ಗೆ ವೈಜ್ಞಾನಿಕ ವರದಿ ಮಾಡಿದ್ದೀರಾ ಎಂಬುದನ್ನು ತಿಳಿಸಬೇಕು. ಮಾತ್ರವಲ್ಲದೆ, ತುಂಬೆ ಕಿಂಡಿಅಣೆಕಟ್ಟು ಮುಂದಿನ 25 ವರ್ಷಗಳಿಗೆ ನೀರುಣಿಸುವ ಸಾಮರ್ಥ್ಯದೊಂದಿಗೆ ಹೊಸತಾಗಿ ಕಟ್ಟಲಾಗಿದೆ. ಆದರೆ ನಿರ್ಮಾಣವಾದ ಒಂದೂವರೆ ವರ್ಷದಲ್ಲೇ ನೀರಿನ ಬರ ನಗರವನ್ನು ಕಾಡುತ್ತಿರಲು ಏನು ಕಾರಣ ಎಂಬುದನ್ನು ತಿಳಿದುಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಬೇಕು. ನಮ್ಮ ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೆ ದೇಹದಲ್ಲಿ ಕೊನೆಯ ಒಂದು ಹನಿ ರಕ್ತ ಇರುವವರೆಗೂ ನಾವು ಹೋರಾಟ ನಡೆಸಲಿದ್ದೇವೆ ಎಂದು ಶಶಿಧರ ಶೆಟ್ಟಿ ಹೇಳಿದ್ದಾರೆ.

ಸಹ್ಯಾದ್ರಿ ಸಂಚಯದ ವಕ್ತಾರ, ಪರಿಸರ ಪ್ರೇಮಿ ದಿನೇಶ್ ಹೊಳ್ಳ ಮಾತನಾಡಿ, ಲೋಕಸಭೆಯ ಸಂದರ್ಭದಲ್ಲೂ ಯಾವುದೇ ಪಕ್ಷದ ಅಭ್ಯರ್ಥಿಗಳು ಎತ್ತಿನಹೊಳೆ ಯೋಜನೆ ಕುರಿತಂತೆ ನಿಲುವು ಮಂಡಿಸಿಲ್ಲ. ಮುಂದಿನ ವರ್ಷ ಎತ್ತಿನಹೊಳೆ ಯೋಜನೆ ಕಾರ್ಯಗತವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಐದು ವರ್ಷಗಳಾದರೂ ಯೋಜನೆ ಪೂರ್ಣಗೊಂಡು ನೀರು ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

ಪಶ್ಚಿಮ ಘಟ್ಟದಲ್ಲಿ ಎಳನೀರಿನಿಂದ ಪುಷ್ಪಗಿರಿಯವರೆಗೆ ನೇತ್ರಾವತಿಯ ಒಂಬತ್ತೂ ಉಪನದಿಗಳಿಗೂ ಹಲ್ಲೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಕೆರೆಗಳ ಒತ್ತುವರಿಗೆ ಸಂಬಂಧಿಸಿ ಪ್ರತ್ಯೇಕ ಪ್ರಾಧಿಕಾರವೇ ಅಸ್ತಿತ್ವದಲ್ಲಿಲ್ಲ. ಎತ್ತಿನಹೊಳೆಯಲ್ಲಿ ಕಳೆದ ಬಾರಿ ಕಾಮಗಾರಿ ನಡೆಸಲು ನೀರಿಲ್ಲದೆ ಹೇಮಾವತಿ ನತಿಯಿಂದ ನೀರು ರಾತ್ರಿ ವೇಳೆ ಕದ್ದು ಮುಚ್ಚಿ ತರಲಾಗಿತ್ತು. ಕಾಮಗಾರಿಗೇ ನೀರಿಲ್ಲದ ಮೇಲೆ ಯೋಜನೆಯಿಂದ ನೀರು ಕೊಡುವುದಾದರೂ ಹೇಗೆ ಎಂದು ದಿನೇಶ್ ಹೊಳ್ಳ ಪ್ರಶ್ನಿಸಿದರು.


ನೇತ್ರಾವತಿ ನದಿಯುದ್ದಕ್ಕೂ 26 ಜಲವಿದ್ಯುತ್ ಯೋಜನೆ: 3 ಕಡೆ ವಿಫಲ!

ನೇತ್ರಾವತಿಯ ನದಿಯುದ್ದಕ್ಕೂ 26 ಕಡೆ ಜಲವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲು ಮಂಜೂರಾತಿ ದೊರಕಿದೆ. ನಿಡ್ಲೆ, ಮೃತ್ಯುಂಜಯ, ಗುಂಡ್ಯದಲ್ಲಿ ಯೋಜನೆ ಪೂರ್ಣಗೊಂಡರೂ ನೀರಿಲ್ಲದೆ ವಿಫಲವಾಗಿದೆ. ಇದೇ ವೇಳೆ ಪಾರ್ಬಿಕಲ್ಲು ಹಾಗೂ ಬಂಡಾಜೆಯಲ್ಲಿ ಜಲವಿದ್ಯುತ್ ಯೋಜನೆಗೆ ಸರ್ವೆ ನಡೆಸಲಾಗಿದೆ. ಇದು ಕೇವಲ ತೆರಿಗೆ ಹಣವನ್ನು ಪೋಲು ಮಾಡುವುದರ ಜತೆಗೆ ಪ್ರಕೃತಿ ಮೇಲೆ ಮಾಡುವ ಮಾರಣಾಂತಿಕ ಹಲ್ಲೆ ಎಂದು ಪರಿಸರವಾದಿ ದಿನೇಶ್ ಹೊಳ್ಳ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News