ಅಮಿತ್ ಶಾ ಕೊಲೆ ಆರೋಪಿ ಎಂದ ರಾಹುಲ್ ಗಾಂಧಿ

Update: 2019-04-24 15:26 GMT

ಭೋಪಾಲ, ಎ.24: ಮಧ್ಯಪ್ರದೇಶದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಕೊಲೆ ಆರೋಪಿ ಎಂದು ಉಲ್ಲೇಖಿಸಿದ್ದು ಇದನ್ನು ಬಿಜೆಪಿ ಬಲವಾಗಿ ಖಂಡಿಸಿದೆ.

“ಕೊಲೆ ಆರೋಪಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ. ವಾಹ್, ಎಂತಹ ವೈಭವ” ಎಂದು ರಾಹುಲ್ ಹೇಳಿದ್ದರು. ಇದನ್ನು ಖಂಡಿಸಿರುವ ಬಿಜೆಪಿ, ವಿಪಕ್ಷದ ಮುಖಂಡನಿಗೆ ಕಾನೂನಿನ ಅರಿವಿಲ್ಲ. ಶಾ ವಿರುದ್ಧದ ಆರೋಪ ರಾಜಕೀಯ ದುರುದ್ದೇಶಪೂರಿತ ಎಂದು ತಿಳಿಸಿದ್ದ ನ್ಯಾಯಾಲಯ ಅವರನ್ನು ಈ ಹಿಂದೆಯೇ ದೋಷಮುಕ್ತಗೊಳಿಸಿದೆ ಎಂಬುದು ಬಹುಷಃ ರಾಹುಲ್‌ಗೆ ತಿಳಿದಿಲ್ಲ ಎಂದು ಹೇಳಿದೆ.

 ರಾಹುಲ್ ಹೇಳಿಕೆಗೆ ಉತ್ತರಿಸಿರುವ ಅಮಿತ್ ಶಾ, “ನ್ಯಾಯಾಲಯದ ಆದೇಶದ ಸಾರವನ್ನು ನಿಮಗೆ ತಿಳಿಸುತ್ತಿದ್ದೇನೆ. ನನ್ನ ವಿರುದ್ಧದ ಆರೋಪ ರಾಜಕೀಯ ಪ್ರೇರಿತ ಸುಳ್ಳು ಆರೋಪ ಮತ್ತು ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿರುವ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿದೆ. ರಾಹುಲ್ ಗಾಂಧಿಯ ಕಾನೂನು ಜ್ಞಾನದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದಿದ್ದಾರೆ.

ಸೊಹ್ರಾಬುದ್ದೀನ್ ಶೇಖ್ ಮತ್ತು ತುಲಸೀರಾಮ್ ಪ್ರಜಾಪ್ರತಿ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಶಾರನ್ನು ವಿಶೇಷ ನ್ಯಾಯಾಲಯ 2014ರಲ್ಲಿ ದೋಷಮುಕ್ತಗೊಳಿಸಿದೆ. ಈ ಮಧ್ಯೆ, ಮಧ್ಯಪ್ರದೇಶದ ಸಿಹೋರಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮತ್ತೊಮ್ಮೆ ಮೋದಿಯನ್ನು ಗುರಿಯಾಗಿಸಿ ‘ಚೌಕಿದಾರ್ ಚೋರ್ ಹೈ’ ಎಂಬ ಘೋಷಣೆ ಕೂಗಿದರು. ಇದೊಂದು ಅತ್ಯುತ್ತಮ ಘೋಷಣೆಯಾಗಿದೆ ಎಂದ ರಾಹುಲ್ ‘ಚೌಕಿದಾರ್’ ಎಂದು ಹೇಳಿದಾಗ ಸಭೆಯಲ್ಲಿದ್ದವರು ‘ಚೋರ್ ಹೈ’ ಎಂದು ಮಾರ್ದನಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಫೇಲ್ ಒಪ್ಪಂದದ ಬಗ್ಗೆ ತನಿಖೆ ನಡೆಸಲಿದೆ ಎಂದು ರಾಹುಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News