ಹಿಂದುಳಿದವರಿಗೆ ಮೀಸಲಿದ್ದ ಹುದ್ದೆ ಭರ್ತಿ ಮಾಡದೆ ಕೇಂದ್ರದಿಂದ ವಂಚನೆ: ಮಾಯಾವತಿ

Update: 2019-04-24 15:30 GMT

ಹೊಸದಿಲ್ಲಿ, ಎ.24: ಹಿಂದುಳಿದ ವರ್ಗದವರಿಗೆ ಮೀಸಲಾತಿಯ ವಿಷಯದಲ್ಲಿ ಪ್ರಧಾನಿ ಮೋದಿ ದೇಶವನ್ನು ತಪ್ಪು ಹಾದಿಗೆಳೆದಿದ್ದಾರೆ ಎಂದು ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.

ಹಿಂದುಳಿದ ವರ್ಗದವರಿಗೆ ಮೀಸಲಾತಿ ರದ್ದಾಗದು ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ದೇಶವನ್ನು ತಪ್ಪು ಹಾದಿಗೆಳೆಯುತ್ತಿದ್ದಾರೆ. ಕಾಂಗ್ರೆಸ್‌ನ ಆಡಳಿತದಂತೆಯೇ ಮೋದಿಯ ಆಡಳಿತದಲ್ಲೂ ಎಸ್ಸಿ,ಎಸ್ಟಿ ಮತ್ತು ಒಬಿಸಿ ವರ್ಗದವರ ಮೀಸಲಾತಿ ಪ್ರಕ್ರಿಯೆ ಪರಿಣಾಮಕಾರಿಯಾಗಿ ನಡೆದಿಲ್ಲ. ಸರಕಾರಿ ಉದ್ಯೋಗದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾಗಿರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದ ಕೇಂದ್ರ ಮತ್ತು ರಾಜ್ಯ(ಉತ್ತರಪ್ರದೇಶ)ದ ಬಿಜೆಪಿ ಸರಕಾರ ಸಮಾಜದ ನಿರ್ಲಕ್ಷಿತ ವರ್ಗದವರ ಹಕ್ಕನ್ನು ಯಾಕೆ ಕಿತ್ತುಕೊಳ್ಳುತ್ತಿದೆ ಎಂದು ಮಾಯಾವತಿ ಪ್ರಶ್ನಿಸಿದರು.

ಪ್ರಧಾನಿ ಮೋದಿ ಉತ್ತರಪ್ರದೇಶದ 22 ಕೋಟಿ ಜನರನ್ನು ವಂಚಿಸಿದ್ದಾರೆ. ಉತ್ತರಪ್ರದೇಶವು ಅವರನ್ನು ಪ್ರಧಾನಿಯನ್ನಾಗಿ ನೇಮಿಸಬಹುದಾದರೆ, ಅವರನ್ನು ಹುದ್ದೆಯಿಂದ ಕೆಳಗಿಳಿಸಲೂ ಶಕ್ತವಾಗಿದೆ. ಇಂತಹ ಲಕ್ಷಣ ಈಗ ಗೋಚರಿಸುತ್ತಿದೆ ಎಂದು ಅವರು ರವಿವಾರ ಟ್ವೀಟ್ ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಬಿಎಸ್ಪಿಯು ತನ್ನ ಸುದೀರ್ಘ ಕಾಲದ ರಾಜಕೀಯ ವೈರಿಯಾಗಿರುವ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News