ನಿಮ್ಮ ಪಾನ್ ಕಾರ್ಡ್‌ನಲ್ಲಿ ತಪ್ಪುಗಳಿವೆಯೇ?: ಆನ್‌ಲೈನ್‌ನಲ್ಲಿ ಹೀಗೆ ಸರಿಪಡಿಸಿಕೊಳ್ಳಿ

Update: 2019-04-24 15:47 GMT

ಪರ್ಮನೆಂಟ್ ಅಕೌಂಟ್ ನಂಬರ್(ಪಾನ್) ಅಥವಾ ಕಾಯಂ ಖಾತೆ ಸಂಖ್ಯೆಯು ಆದಾಯ ತೆರಿಗೆ ಇಲಾಖೆಯು ದೇಶದಲ್ಲಿನ ಎಲ್ಲ ತೆರಿಗೆದಾತರಿಗೆ ನೀಡುವ ಗುರುತಿನ ಸಂಖ್ಯೆಯಾಗಿದೆ. ಪಾನ್ ಕಾರ್ಡ್ ಹಲವಾರು ಉಪಯೋಗಗಳನ್ನು ಹೊಂದಿದೆ. ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಕಡ್ಡಾಯವಾಗಿರುವುದರ ಜೊತೆಗೆ ಗುರುತಿನ ಪುರಾವೆಯನ್ನಾಗಿಯೂ ಅದನ್ನು ಬಳಸಬಹುದು. ಉದ್ಯಮದ ನೋಂದಾವಣೆ,ಹಣಕಾಸು ವಹಿವಾಟುಗಳು,ಬ್ಯಾಂಕ್ ಖಾತೆಯನ್ನು ತೆರೆಯಲು,ಫೋನ್/ಗ್ಯಾಸ್ ಸಂಪರ್ಕ ಪಡೆಯಲು,ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಹೂಡಿಕೆ ಇತ್ಯಾದಿಗಳಿಗೂ ಪಾನ ಕಾರ್ಡ್‌ನ್ನು ಬಳಸಬಹುದು. ಕೆಲವೊಮ್ಮೆ ನಿಗದಿತ ನಮೂನೆಗಳನ್ನು ತುಂಬುವುದೂ ಸವಾಲಿನ ಕೆಲಸವಾಗುತ್ತದೆ, ಹೀಗಾಗಿ ಪಾನ್ ಕಾರ್ಡ್ ಅರ್ಜಿಯಲ್ಲಿ ಹೆಸರು ಬರೆಯುವಾಗ ತಪ್ಪುಗಳೂ ಆಗಬಹುದು. ಇಂತಹ ತಪ್ಪುಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಸರಿಪಡಿಸಿಕೊಳ್ಳಬಹುದು. ಇದಕ್ಕಾಗಿ ಅನುಸರಿಸಬೇಕಾದ ಕ್ರಮಗಳಿಲ್ಲಿವೆ.....

ಮೊದಲು ಎನ್‌ಎಸ್‌ಡಿಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅದರಲ್ಲಿರುವ ‘ಅಪ್ಲಿಕೇಷನ್ ಟೈಪ್’ ಆಯ್ಕೆಯನ್ನು ಕ್ಲಿಕ್ ಮಾಡಿ ಡ್ರಾಪ್ ಡೌನ್ ಮೆನುವಿನಿಂದ ‘ಚೇಂಜಸ್ ಆರ್ ಕರೆಕ್ಷನ್ ಇನ್ ಎಕ್ಸಿಸ್ಟಿಂಗ್ ಪಾನ್ ಕಾರ್ಡ್(ಈಗಿರುವ ಪಾನ್ ಕಾರ್ಡ್‌ನಲ್ಲಿ ಬದಲಾವಣೆಗಳು ಅಥವಾ ತಿದ್ದುಪಡಿ)’ ನ್ನು ಆಯ್ಕೆ ಮಾಡಿಕೊಳ್ಳಿ. ಇಷ್ಟಾದ ಬಳಿಕ ‘ಅಪ್ಲಿಕಂಟ್ ಇನ್ಫಾರ್ಮೇಷನ್(ಅರ್ಜಿದಾರರ ಮಾಹಿತಿ)’ ವಿಭಾಗವನ್ನು ಆಯ್ದುಕೊಂಡು ಟೈಟಲ್,ಅಡ್ಡಹೆಸರು/ಕೊನೆಯ ಹೆಸರು,ಮೊದಲ ಹೆಸರು,ಮಧ್ಯದ ಹೆಸರು,ಜನ್ಮ ದಿನಾಂಕ,ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಎಲ್ಲ ವಿವರಗಳನ್ನು ಸಲ್ಲಿಸಿ. ಇವುಗಳನ್ನು ಸರಿಯಾಗಿ ದಾಖಲಿಸಿದ ಬಳಿಕ ‘ವೆದರ್ ಸಿಟಿಜನ್ ಆಫ್ ಇಂಡಿಯಾ(ಭಾರತದ ಪ್ರಜೆಯೇ)’ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ 10 ಅಂಕಿಗಳ ಪಾನ್ ಕಾರ್ಡ್ ಸಂಖ್ಯೆಯನ್ನು ದಾಖಲಿಸಿ.

ಈಗ ಕಾಪ್ಚಾ ಕೋಡ್ ಅನ್ನು ತುಂಬಿ ’ಸಬ್‌ಮಿಟ್’ ಗುಂಡಿಯನ್ನು ಒತ್ತಿರಿ. ಇದರ ನಂತರ ನಿಮ್ಮ ಕೋರಿಕೆಯು ದಾಖಲಾಗುತ್ತದೆ ಮತ್ತು ಟೋಕನ್ ಸಂಖ್ಯೆಯನ್ನು ಸೃಷ್ಟಿಸಿ ನೀವು ಪಾನ್ ಅರ್ಜಿಯಲ್ಲಿ ನಮೂದಿಸಿರುವ ಇಮೇಲ್ ಐಡಿಗೆ ಅದನ್ನು ರವಾನಿಸಲಾಗುತ್ತದೆ. ಮುಂದುವರಿಯಲು ಬಿಲೋವ್ ಬಟನ್‌ನ್ನು ಕ್ಲಿಕ್ ಮಾಡಿ ಪಾನ್ ಅರ್ಜಿಯ ಉಳಿದ ಭಾಗವನ್ನು ಭರ್ತಿ ಮಾಡಿ. ಈ ಬಾರಿ ಫಾರ್ಮ್‌ನ್ನು ಸರಿಯಾಗಿ ತುಂಬಿ ಮತ್ತು ಅಗತ್ಯ ಗುರುತಿನ ಪುರಾವೆಯನ್ನು ಒದಗಿಸಿ. ‘ಸೇವ್ ಡ್ರಾಫ್ಟ್’ ಆಯ್ಕೆಯನ್ನು ಕ್ಲಿಕ್ ಮಾಡುವ ಮುನ್ನ ಎಲ್ಲ ವಿವರಗಳನ್ನು ಸರಿಯಾಗಿ ಪರಿಶೀಲಿಸಿ. ಈಗ ಹಣಪಾವತಿಯನ್ನು ಮಾಡುವ ಮೂಲಕ ಆನ್‌ಲೈನ್ ಫಾರ್ಮ್ ಸಲ್ಲಿಕೆಯನ್ನು ಪೂರ್ಣಗೊಳಿಸಿ. ಅಂದ ಹಾಗೆ ಆನ್‌ಲೈನ್ ಬಳಸದವರು ಪಾನ್ ಕಾರ್ಡ್‌ನಲ್ಲಿಯ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಆಫ್ ಲೈನ್ ವಿಧಾನವನ್ನು ಬಳಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News