ಬಾಲಕೋಟ್‌ ಕುರಿತ ಪ್ರಶ್ನೆಗೆ ಉತ್ತರಿಸುವುದು ಸರಕಾರದ ಜವಾಬ್ದಾರಿ: ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ

Update: 2019-04-24 15:47 GMT

ಹೊಸದಿಲ್ಲಿ, ಎ. 23: ಸೇನೆ ಹಾಗೂ ಸರಕಾರವನ್ನು ಪ್ರಶ್ನಿಸುವ ಹಕ್ಕು ಪ್ರತಿ ನಾಗರಿಕನಿಗೆ ಇದೆ ಎಂದು ಮಾಜಿ ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿ ಮಂಗಳವಾರ ಹೇಳಿದ್ದಾರೆ.

 ಟಿ.ವಿ.ಯೊಂದರ ಸಂದರ್ಶನದಲ್ಲಿ ಪಾಲ್ಗೊಂಡ ಅವರು, ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದು ಸರಕಾರದ ಜವಾಬ್ದಾರಿ ಎಂದರು. ಅನ್ಸಾರಿ ಅವರು 2007ರಿಂದ 2017ರ ವರೆಗೆ ಉಪ ರಾಷ್ಟ್ರಪತಿಯಾಗಿದ್ದರು. ಪಾಕಿಸ್ತಾನದ ಬಾಲಕೋಟ್‌ನಲ್ಲಿ ನಡೆದಿದೆ ಎನ್ನಲಾದ ದಾಳಿಯ ಕುರಿತು ಕೇಂದ್ರ ಸರಕಾರದ ಬಗ್ಗೆ ಊಹಾಪೋಹ ಹಾಗೂ ಪ್ರತಿಪಕ್ಷಗಳಿಂದ ಟೀಕೆ ವ್ಯಕ್ತವಾದ ಬಳಿಕ ಅನ್ಸಾರಿ ಅವರ ಈ ಹೇಳಿಕೆ ಹೊರ ಬಿದ್ದಿದೆ.

ಸರಕಾರ ಅಥವಾ ಸೇನೆಯ ಬಗ್ಗೆ ಪ್ರಶ್ನಿಸುವುದು ದೇಶ ವಿರೋಧಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅನ್ಸಾರಿ, ವಿದೇಶಾಂಗ ನೀತಿ ಹಾಗೂ ರಕ್ಷಣೆಗೆ ಸಂಬಂಧಿಸಿದ ನಿರ್ದಿಷ್ಟ ವಿಷಯಗಳ ಬಗೆಗಿನ ಸಾಧನೆಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೆ ಇದೆ ಎಂದರು. ಫೆಬ್ರವರಿ 26ರಂದು ನಡೆದ ಬಾಲಕೋಟ್ ವೈಮಾನಿಕ ದಾಳಿ ಬಳಿಕ ಅದರ ಪರಿಣಾಮದ ಬಗ್ಗೆ ಪ್ರಶ್ನಿಸುತ್ತಿರುವ ಪ್ರತಿಪಕ್ಷಗಳನ್ನು ಕೇಂದ್ರ ಸರಕಾರ ಟೀಕಿಸುತ್ತಿದೆ.

 ಪಾಕಿಸ್ತಾನದ ಎಫ್-16 ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ ಎಂಬ ಪಾಕಿಸ್ತಾನದ ಪ್ರತಿಪಾದನೆ ಬಗ್ಗೆ ಪ್ರತಿಕ್ರಿಯಿಸಿದ ಅನ್ಸಾರಿ, “ನಾನು ಹುಲಿಯನ್ನು ಕೊಂದೆ ಎಂದು ಹೇಳಿದರೆ, ಹುಲಿಯನ್ನು ತೋರಿಸಬೇಕು. ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಯಾವುದೇ ತೊಂದರೆ ಆಗದು ಎಂದಿದ್ದಾರೆ. ನನಗೆ ವಾಯು ಪಡೆಯ ತಾಂತ್ರಿಕತೆ ಬಗ್ಗೆ ಗೊತ್ತಿಲ್ಲ. ಒಂದು ದೇಶ ವಿಮಾನವನ್ನು ಹೊಡೆದುರುಳಿಸಿದೆ ಎಂದು ಹೇಳುತ್ತಿದೆ. ಇನ್ನೊಂದು ದೇಶ ವಿಮಾನವನ್ನು ಹೊಡೆದುರುಳಿಸಿಲ್ಲ ಎಂದು ಹೇಳುತ್ತಿದೆ. ಆದುದರಿಂದ ಇದರ ನಡುವೆ ಏನೋ ಮುಖ್ಯವಾದುದು ಇದೆ” ಎಂದು ಅನ್ಸಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News