ಮಾನನಷ್ಟ ಪ್ರಕರಣ: ಕೇಜ್ರಿವಾಲ್ ವಿರುದ್ಧದ ಜಾಮೀನು ರಹಿತ ವಾರಂಟ್ ರದ್ದು

Update: 2019-04-24 16:46 GMT

ಹೊಸದಿಲ್ಲಿ,ಎ.24: ಆರು ವರ್ಷಗಳ ಹಿಂದೆ ದಾಖಲಾಗಿದ್ದ ಮಾನನಷ್ಟ ಪ್ರಕರಣವೊಂದರಲ್ಲಿ ತನ್ನೆದುರು ಹಾಜರಾಗಲು ವಿಫಲರಾಗಿದ್ದಕ್ಕಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್,ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್‌ಗಳನ್ನು ದಿಲ್ಲಿಯ ಹೆಚ್ಚುವರಿ ಮುಖ್ಯ ಮಹಾನಗರ ನ್ಯಾಯಾಲಯವು ಬುಧವಾರ ರದ್ದುಗೊಳಿಸಿದೆ.

ಮೂವರು ನಾಯಕರ ವಕೀಲರು ವಾರಂಟ್‌ಗಳನ್ನು ರದ್ದುಗೊಳಿಸುವಂತೆ ಕೋರಿಕೊಂಡ ಬಳಿಕ ನ್ಯಾ.ಸಮರ ವಿಶಾಲ ಅವರು ಈ ಆದೇಶವನ್ನು ಹೊರಡಿಸಿದರು. ನ್ಯಾಯಾಲಯವು ಎ.23ರಂದು ವಿಚಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ತನ್ನ ಸಾಮಾಜಕ ಸೇವೆಗಳಿಂದ ಕೇಜ್ರಿವಾಲ್ ಸಂತುಷ್ಟರಾಗಿದ್ದಾರೆ ಎಂದು ತನಗೆ ತಿಳಿಸಿದ್ದ ಆಪ್ ಕಾರ್ಯಕರ್ತರು ದಿಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತೆ ತನಗೆ ಸೂಚಿಸಿದ್ದರು. ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯು ತನಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎಂದು ಸಿಸೋದಿಯಾ ಮತ್ತು ಯಾದವ ತನಗೆ ತಿಳಿಸಿದ್ದರು. ಅದರಂತೆ ತಾನು ಚುನಾವಣೆಗೆ ಸ್ಪರ್ಧಿಸಲು ಅರ್ಜಿಯನ್ನು ತುಂಬಿದ್ದೆ. ಆದರ ನಂತರ ತನಗೆ ಟಿಕೆಟ್ ನಿರಾಕರಿಸಲಾಗಿತ್ತು ಎಂದು ಸುರೇಂದ್ರ ಕುಮಾರ್ ಶರ್ಮಾ ಅವರು 2013ರಲ್ಲಿ ಸಲ್ಲಿಸಿದ್ದ ದೂರಿನಲ್ಲಿ ಆರೋಪಿಸಿದ್ದರು.

ಆರೋಪಿಗಳು ತನ್ನ ವಿರುದ್ಧ ಅವಮಾನಕಾರಿ ಶಬ್ಧಗಳನ್ನು ಬಳಸಿದ್ದು ಪ್ರಮುಖ ದಿನಪತ್ರಿಕೆಗಳು ಇದನ್ನು ಪ್ರಕಟಿಸಿದ್ದವು ಎಂದೂ ಅವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News