ಕೆರ್ಬರ್-ಪೆಟ್‌ಕೊವಿಕ್ ಹಣಾಹಣಿ

Update: 2019-04-24 18:04 GMT

ಬರ್ಲಿನ್, ಎ.24: ಪ್ರಥಮ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಸ್ಪೇನ್‌ನ ಸಾರಾ ಸಾರ್ರಿಬಸ್ ಟೊರ್ಮೊ ಅವರನ್ನು ಮಣಿಸಿದ ಜರ್ಮನಿಯ ಆ್ಯಂಡ್ರಿಯಾ ಪೆಟ್‌ಕೊವಿಕ್ ಸ್ಟಟ್‌ಗಾರ್ಟ್ ಡಬ್ಲುಟಿಎ ಓಪನ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದು, ಮುಂದಿನ ಸುತ್ತಿನ ಪಂದ್ಯದಲ್ಲಿ ತಮ್ಮದೇ ದೇಶದ ಆ್ಯಂಜೆಲಿಕ್ ಕೆರ್ಬರ್‌ರ ಸವಾಲು ಎದುರಿಸಲಿದ್ದಾರೆ.

ಸಿಮೊನಾ ಹಾಲೆಪ್ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದು, ವಿಶ್ವದ ನಂ.5 ಆಟಗಾರ್ತಿ ಕೆರ್ಬರ್ ಎರಡನೇ ಸುತ್ತಿಗೆ ಬೈ ಪಡೆದಿದ್ದಾರೆ. ಗುರುವಾರ ನಡೆಯುವ ಪಂದ್ಯದಲ್ಲಿ ಜರ್ಮನಿ ಜೋಡಿ ಪೆಟ್‌ಕೊವಿಕ್-ಕೆರ್ಬರ್ ಹಣಾಹಣಿ ನಡೆಸಲಿದೆ. ಮತ್ತೊಂದು ಪಂದ್ಯದಲ್ಲಿ ಲೌರಾ ಸಿಜ್ಮಂಡ್ ಅವರು ಉಕ್ರೇನ್‌ನ ಲೆಸಿಯ ಸುರೆಂಕೊರನ್ನು ಪರಾಭವಗೊಳಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ ಮೂರನೇ ಜರ್ಮನಿ ಆಟಗಾರ್ತಿ ಎನಿಸಿದರು. ದಿನದ ಆರಂಭದಲ್ಲಿ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಅವರು ರಶ್ಯದ ದಾರ್ಯಾ ಕಸತ್ಕಿನಾಗೆ ಶರಣಾಗಿ ಟೂರ್ನಿಯಿಂದ ಹೊರನಡೆದರು. ಇನ್ನೊಂದು ಪಂದ್ಯದಲ್ಲಿ ಲಾಟ್ವಿಯದ ಅನಸ್ತೇಸಿಜಾ ಸೆವಾತ್ಸೊವಾ ಅವರು ತಮ್ಮದೇ ದೇಶದ ಜೆಲೆನಾ ಒಸ್ಟಾಂಪೆಂಕೊ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಕಾಲಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News