ಬಿಜೆಪಿಯ ಲಾಭಕ್ಕಾಗಿ ನಮ್ಮ ಹೇಳಿಕೆಗಳನ್ನು ತಿರುಚಲಾಗಿದೆ: ಸುದ್ದಿಸಂಸ್ಥೆ ವಿರುದ್ಧ ಮಾಜಿ ಸೇನಾಧಿಕಾರಿಗಳ ಆರೋಪ

Update: 2019-04-25 13:43 GMT

ಹೊಸದಿಲ್ಲಿ, ಎ.25: ದೇಶದ ಸೇನಾಪಡೆಗಳನ್ನು ರಾಜಕೀಯ ಲಾಭಕ್ಕೋಸ್ಕರ ಬಳಸದೇ ಇರುವಂತೆ ತಾವು ಮಾಡಿದ ಅಪೀಲಿನ  ಉದ್ದೇಶಗಳನ್ನು ತಪ್ಪಾಗಿ ಬಿಂಬಿಸಲು ಭಾರತೀಯ ಸುದ್ದಿ ಸಂಸ್ಥೆ ಎಎನ್‍ಐ ಪ್ರಯತ್ನಿಸಿದೆ ಎಂದು ಮಾಜಿ ಸೇನಾಧಿಕಾರಿಗಳ ಗುಂಪೊಂದು ಜಾಗತಿಕ ಮಾಧ್ಯಮ ಸಂಸ್ಥೆ ಥಾಮ್ಸನ್ ರಾಯ್ಟರ್ಸ್ ಗೆ ದೂರಿದೆ. ಥಾಮ್ಸನ್ ರಾಯ್ಟರ್ಸ್ ಎಎನ್‍ಐ ಜತೆ  ಹೂಡಿಕೆ ಹಾಗೂ ಸಂಪಾದಕೀಯ ವಿಚಾರಗಳಲ್ಲೂ ಪಾಲುದಾರಿಕೆ ಹೊಂದಿದೆ.

“ನಮ್ಮ ಗೌರವಯುತ ಉದ್ದೇಶಗಳಿಗೆ ಅಗೌರವವುಂಟು ಮಾಡಲು ಹಾಗೂ ನಮ್ಮ  ಹೇಳಿಕೆಗಳನ್ನು ತಿರುಚಿ ಎಎನ್‍ಐ ಭಾರತದ ಆಡಳಿತ ಪಕ್ಷದ ಅಣತಿಯಂತೆ ಕಾರ್ಯಾಚರಿಸಿದೆ ಎಂದು ನಮಗನಿಸುತ್ತದೆ” ಎಂದು ಮಾಜಿ ಸೇನಾಧಿಕಾರಿಗಳ ಪರವಾಗಿ ನಿವೃತ್ತ ಮೇಜರ್ ಪ್ರಿಯದರ್ಶಿ ಚೌಧುರಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಆದರೆ ಈ ಆರೋಪಗಳನ್ನು ಎಎನ್‍ಐ ನಿರಾಕರಿಸಿದೆ.

ಎಪ್ರಿಲ್ 12ರಂದು ಭಾರತೀಯ ಸೇನಾಪಡೆಗಳ 150ಕ್ಕೂ ಹೆಚ್ಚು ಮಾಜಿ ಅಧಿಕಾರಿಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೇಶದ ರಕ್ಷಣಾ ಪಡೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸುವುದನ್ನು ತಡೆಯುವಂತೆ ಕೋರಿದ್ದರು. ಈ ಪತ್ರಕ್ಕೆ ಸಹಿ ಹಾಕಿದವರಲ್ಲಿ ರಕ್ಷಣಾ ಪಡೆಗಳ ಎಂಟು ಮಂದಿ ಮಾಜಿ ಅಧ್ಯಕ್ಷರೂ ಸೇರಿದ್ದರು.

ಆದರೆ ಪತ್ರಕ್ಕೆ ತಾವು ಸಹಿ ಹಾಕಿದ್ದನ್ನು ಮಾಜಿ ಸೇನಾ ಮುಖ್ಯಸ್ಥ ಸುನಿತ್ ಫ್ರಾನ್ಸಿಸ್ ರಾಡ್ರಿಗಸ್ ಹಾಗೂ ಮಾಜಿ ವಾಯುಸೇನಾ ಮುಖ್ಯಸ್ಥ ಎನ್ ಸಿ ಸೂರಿ ನಿರಾಕರಿಸಿದ್ದಾರೆಂದು ಎಎನ್‍ಐ ವರದಿ ಮಾಡಿತ್ತಲ್ಲದೆ, ಸೇನೆಯ ಮಾಜಿ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎಂ ಎಲ್ ನಾಯ್ಡು ಕೂಡ ಈ ಪತ್ರಕ್ಕೆ ತಮ್ಮ ಒಪ್ಪಿಗೆ ಪಡೆದಿರಲಿಲ್ಲ ಎಂದು ಹೇಳಿದ್ದಾರೆಂದು ಎಎನ್‍ಐ ವರದಿ ಮಾಡಿತ್ತು.

ಆದರೆ ಎಎನ್‍ಐ ತನ್ನ ಹೇಳಿಕೆಯನ್ನು ತಪ್ಪಾಗಿ ಪ್ರಕಟಿಸಿದೆ ಎಂದು ಎಪ್ರಿಲ್ 14ರಂದು ಎಂ.ಎಲ್. ನಾಯ್ಡು ಆರೋಪಿಸಿದ್ದರೆಂದು ದಿ ಟೆಲಿಗ್ರಾಫ್ ವರದಿ ಮಾಡಿತ್ತು. ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ಇಮೇಲ್ ಮೂಲಕ ನಾಯ್ಡು ಎಪ್ರಿಲ್ 8ರಂದು ಬೆಂಬಲಿಸಿದ್ದರು ಎಂದು ಪತ್ರಕ್ಕೆ ಸಹಿ ಹಾಕಿದ್ದ ಇತರ ಮಾಜಿ ಸೇನಾಧಿಕಾರಿಗಳು ತಿಳಿಸಿದ್ದರು.

 ಮಾಜಿ ಸೇನಾಧಿಕಾರಿಗಳ ಅಪೀಲನ್ನು ತಪ್ಪಾಗಿ ಬಿಂಬಿಸಲು ಎಎನ್‍ಐ ಯತ್ನಿಸಿದೆ ಎಂಬ ‘ದಿ ವೈರ್’ ಹಾಗೂ ‘ನ್ಯೂಸ್‍ ಸೆಂಟ್ರಲ್ 24 x7’ ವರದಿಗಳನ್ನೂ ಚೌಧುರಿ ಉಲ್ಲೇಖಿಸಿದ್ದಾರೆ.

“ನನ್ನ ಮಾತುಗಳನ್ನು ದೃಶ್ಯ ಮಾಧ್ಯಮ ಮುಖ್ಯವಾಗಿ ಎಎನ್‍ಐ ಉಲ್ಲೇಖಿಸಿದೆಯೆಂದು ಸ್ನೇಹಿತರು ತಿಳಿಸಿದ್ದಾರೆ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಂತರ ಎಎನ್‍ಐ ಅಪರಾಹ್ನ ನನ್ನನ್ನು ಸಂಪರ್ಕಿಸಿ ನನ್ನ ಬಳಿ ತನ್ನ ತಂಡ ಕಳುಹಿಸಿತ್ತು. ಆ ಮಾತುಕತೆಯ  ಧ್ವನಿಮುದ್ರಿಕೆ ಕಳುಹಿಸುತ್ತಿದ್ದೇನೆ,'' ಎಂದು ನಾಯ್ಡು ನಿವೃತ್ತ ಮೇಜರ್ ಜನರಲ್ ಎಸ್ ಜಿ ಒಂಬತ್ಕೆರೆ ಅವರಿಗೆ ಪತ್ರ ಬರೆದಿದ್ದರೆಂದು ನ್ಯೂಸ್ ಸೆಂಟ್ರಲ್ ಎಪ್ರಿಲ್ 16ರಂದು ವರದಿ ಮಾಡಿತ್ತು.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಎಎನ್‍ಐ ಲೈವ್ ಸರ್ವಿಸಸ್ ಸಂಪಾದಕ ಇಶಾನ್ ಪ್ರಕಾಶ್,  ``ಎಎನ್‍ಐ ಗೌರವಕ್ಕೆ ಚ್ಯುತಿ ತರಲು ಸ್ಥಾಪಿತ ಹಿತಾಸಕ್ತಿಗಳು ಯತ್ನಿಸುತ್ತಿವೆ'' ಎಂದರಲ್ಲದೆ  ಮಾಜಿ ಸೇನಾಧಿಕಾರಿಗಳ ಪತ್ರದ ಬಗ್ಗೆ ಉಲ್ಲೇಖಿಸಿ ಅವರನ್ನು ಬೆಂಬಲಿಸಿ ಹಾಗೂ ವಿರೋಧಿಸಿ ಕೆಲವರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಎಎನ್‍ಐ ಪ್ರಕಟಿಸಿದೆ. ಎಲ್ಲಾ ಉಲ್ಲೇಖಗಳಿಗೆ ಆಡಿಯೋ ಮತ್ತು ವೀಡಿಯೋ ಸಾಕ್ಷ್ಯಗಳಿವೆ. ಆದುದರಿಂದ ನಮ್ಮ ವಿರುದ್ಧದ ಆರೋಪ ನಿರಾಧಾರ,''ಎಂದಿದ್ದಾರೆ.

“ತಾವು ಪತ್ರಕ್ಕೆ ಸಹಿ ಹಾಕಿರುವ ಬಗ್ಗೆ ಕೆಲ ಮಾಜಿ ಅಧಿಕಾರಿಗಳು ನಿರಾಕರಿಸಿದ್ದಾರೆಂಬ ಬಗ್ಗೆ ಎಎನ್‍ಐ ಹೇಳಿಕೊಂಡಿರುವುದು ಅದರ ಉದ್ದೇಶಗಳ ಬಗ್ಗೆ ಸಂಶಯ ಮೂಡಿಸುತ್ತದೆ.  ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳ ವೇಳೆ ಈ ರೀತಿ  ತಾರತಮ್ಯಕಾರಿ ನಿಲುವಿನಿಂದ  ಪ್ರಭಾವ ಬೀರುವ ಯತ್ನ ಇದಾಗಿರಬಹುದು'' ಎಂದು ಚೌಧುರಿ ಹೇಳಿದ್ದಾರೆ.

ತನ್ನ ಪಾಲುದಾರರ ಸಂಪಾದಕೀಯ ಪದ್ಧತಿಗಳನ್ನು ಥಾಮ್ಸನ್ ರಾಯ್ಟರ್ಸ್ ಹೇಗೆ ಪರಿಶೀಲಿಸುತ್ತದೆ ಹಾಗೂ  ನಮ್ಮ ನೈಜ ಅಪೀಲಿನ ಬನಗ್ಗೆ ತಪ್ಪಾಗಿ ವರದಿ ಮಾಡಿರುವುದು ಎಎನ್‍ಐ ಮಾನದಂಡಗಳಿಗೆ ಪೂರಕವಾಗಿದೆಯೇ  ಎಂದು ಚೌಧುರಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News