ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸ್ಪರ್ಧೆಯನ್ನು ಪ್ರಧಾನಿ ಸಮರ್ಥಿಸಿದ್ದು ಆಘಾತಕಾರಿ

Update: 2019-04-25 13:48 GMT

ಹೊಸದಿಲ್ಲಿ, ಎ.25: ಮಾಲೆಗಾಂವ್ ಸ್ಫೋಟದ ಆರೋಪಿ ಪ್ರಜ್ಞಾ ಸಿಂಗ್ ಅವರನ್ನು ಭೋಪಾಲದ ಲೋಕಸಭಾ ಅಭ್ಯರ್ಥಿಯನ್ನಾಗಿಸಿದ ಬಿಜೆಪಿ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಹಾಗೂ ಆಕೆಯ ಅಭ್ಯರ್ಥಿತನವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ 71 ಮಂದಿ ನಿವೃತ್ತ ಐಎಎಸ್ ಅಧಿಕಾರಿಗಳ ತಂಡ ಬಹಿರಂಗ ಪತ್ರ ಬರೆದಿದೆ.

“ತಮ್ಮ ಪಕ್ಷ ಉಗ್ರವಾದದ ವಿರುದ್ಧ ಹೋರಾಟಕ್ಕಾಗಿ ಮತ ಯಾಚಿಸುವುದರ ಜತೆಗೆ ಉಗ್ರವಾದ ಪ್ರಕರಣದ ಆರೋಪಿಯೊಬ್ಬರು ಸ್ಪರ್ಧಿಸುವುದನ್ನು ಬೆಂಬಲಿಸುವುದರ ಹಿಂದಿನ ವಿಪರ್ಯಾಸದಿಂದ ಪ್ರಧಾನಿ ನರೇಂದ್ರ ಮೋದಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಪತ್ರದಲ್ಲಿ ಬರೆಯಲಾಗಿದೆ.

“ಪ್ರಜ್ಞಾ ಠಾಕುರ್ ಅವರನ್ನು ಕಣಕ್ಕಿಳಿಸುವ ನಿರ್ಧಾರ ರಾಜಕೀಯ ಸಮಯಸಾಧಕತನ ಎಂದು ಹೇಳಿ ಮುಗಿಸಬಹುದಾಗಿದ್ದರೂ ಆಕೆಯ ಅಭ್ಯರ್ಥಿತನವನ್ನು ಸ್ವತಃ ಪ್ರಧಾನಿಯೇ ಬೆಂಬಲಿಸಿ ಅದು ಭಾರತದ ನಾಗರಿಕ ಪರಂಪರೆಯ ದ್ಯೋತಕ ಎಂದು ಹೇಳಿರುವುದು ಆಘಾತಕಾರಿ'' ಎಂದು ಪತ್ರದಲ್ಲಿ ಬಣ್ಣಿಸಲಾಗಿದೆ.

``ಉಗ್ರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಹಾಗೂ ಆರೋಗ್ಯ ಕಾರಣಗಳಿಗಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಪ್ರಜ್ಞಾ ಠಾಕುರ್ ಳನ್ನು ಅಭ್ಯರ್ಥಿಯನ್ನಾಗಿಸಿದ್ದು ಸಾಕಾಗಿಲ್ಲವೆಂಬಂತೆ ಆಕೆ ಈ ರಾಜಕೀಯ ವೇದಿಕೆಯನ್ನು ಧರ್ಮಾಂಧತೆಯನ್ನು ಪಸರಿಸಲು ಹಾಗೂ ಉಗ್ರರ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣ ಬಲಿ ನೀಡಿದ ಹೇಮಂತ್ ಕರ್ಕರೆ ಅವರಂತಹ ಐಪಿಎಸ್ ಅಧಿಕಾರಿಯನ್ನೇ ಅವಮಾನಿಸಲು ಬಳಸಿದ್ದಾರೆ” ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ನಾಗರಿಕರು ಆಕೆಯ ಹೇಳಿಕೆಯನ್ನು ಖಂಡಿಸಬೇಕು, ಬಿಜೆಪಿ ಆಕೆಯ ಅಭ್ಯರ್ಥಿತನವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಬೇಕು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದಾಗಿ ಕೈಗೊಂಡ ಪ್ರತಿಜ್ಞೆಯನ್ನು ಪ್ರಧಾನಿಗೆ ನೆನಪಿಸಬೇಕು'' ಎಂದು ಪತ್ರದಲ್ಲಿ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News