ಪ್ರಜ್ಞಾ ವಿರುದ್ಧ ಪ್ರಚಾರಕ್ಕೆ ಮಾಲೆಗಾಂವ್ ಸ್ಫೋಟ ಸಂತ್ರಸ್ತರ ನಿರ್ಧಾರ

Update: 2019-04-25 14:45 GMT

ಭೋಪಾಲ, ಎ.25: ಭೋಪಾಲ್ ಸಂಸದೀಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿಯ ಪ್ರಜ್ಞಾ ಠಾಕೂರ್ ವಿರುದ್ಧ ಚುನಾವಣಾ ಪ್ರಚಾರ ನಡೆಸುವುದಾಗಿ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಸಂತ್ರಸ್ತರ ಕುಟುಂಬದವರೂ ಸೇರಿದಂತೆ 200 ಜನರ ತಂಡವೊಂದು ಹೇಳಿದೆ.

ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿಜಿ ಕೋಲ್ಸೆ ಪಾಟೀಲ್ ಈ ತಂಡದ ನೇತೃತ್ವ ವಹಿಸಿದ್ದಾರೆ. ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾ ವಿರುದ್ಧ ಸಾಕಷ್ಟು ಪುರಾವೆಗವೆ. ಭೋಪಾಲ್‌ಗೆ ತೆರಳಿ ಈ ಪುರಾವೆಗಳನ್ನು ಜನರೆದುರು ಪ್ರಸ್ತುತ ಪಡಿಸಲಿದ್ದೇವೆ ಎಂದು ಪಾಟೀಲ್ ಹೇಳಿದ್ದಾರೆ. ಬಾಂಬ್ ಸ್ಫೋಟದ ಷಡ್ಯಂತ್ರ ರೂಪಿಸಿದ ತಂಡದವರು ನಡೆಸಿದ ನಾಲ್ಕು ಸಭೆಗಳಲ್ಲೂ ಪ್ರಜ್ಞಾ ಹಾಜರಿದ್ದರು. ಅವರ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ಪಾಟೀಲ್ ಹೇಳಿದ್ದಾರೆ.

 ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಹತರಾಗಿರುವ ಅಥವಾ ಗಾಯಗೊಂಡಿರುವ ಕುಟುಂಬದ 6 ಮಂದಿ ಈ ತಂಡದಲ್ಲಿರುತ್ತಾರೆ. ಅಲ್ಲದೆ 2006ರ ಮುಂಬೈ ರೈಲು ಬಾಂಬ್ ಸ್ಫೋಟದ ಆರೋಪಿಯೆಂದು ಹೆಸರಿಸಲಾಗಿದ್ದ ಮತ್ತು ನ್ಯಾಯಾಲಯ ನಿರ್ದೋಷಿಯೆಂದು ಖುಲಾಸೆಗೊಳಿಸಿದ್ದ ಅಬ್ದುಲ್ ವಾಹಿದ್ ಶೇಖ್, ಜರ್ಮನ್ ಬೇಕರಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ತಾರಿಖ್ ಬೇಗ್‌ನ ಸಹೋದರ ಹಿಮಾಯತ್ ಬೇಗ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಂಜುಂ ಇನಾಮ್ದಾರ್ ಹೇಳಿದ್ದಾರೆ.

 ಹಿಂದುತ್ವ ಭಯೋತ್ಪಾದನೆ ಯೋಜನೆಯನ್ನು ಜನರೆದುರು ತೆರೆದಿಟ್ಟು ಪ್ರಜ್ಞಾ ಠಾಕೂರ್‌ಗೆ ಮತ ಚಲಾಯಿಸದಂತೆ ಮತದಾರರಿಗೆ ಮನವಿ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ. ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಾದ ಪ್ರಜ್ಞಾ ಹಾಗೂ ಲೆಕ ಶ್ರೀಕಾಂತ್ ಪುರೋಹಿತ್‌ರನ್ನು ಪುಣೆಯ ವಿಚಾರಣಾ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಂದರ್ಭ ಅವರ ಮೇಲೆ ಗುಲಾಬಿ ಹೂವಿನ ದಳ ಎರಚಿ ಸ್ವಾಗತಿಸಿರುವುದು ದುರದೃಷ್ಟಕರ. ಅವರ ನಿಜಸ್ಥಿತಿಯನ್ನು ಬಹಿರಂಗಪಡಿಸಲಿದ್ದೇವೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಸುರೇಶ್ ಖೋಪಡೆ ಹೇಳಿದ್ದಾರೆ.

ಈ ಮಧ್ಯೆ, ಕರ್ಕರೆ ವಿರುದ್ಧದ ಪ್ರಜ್ಞಾ ಹೇಳಿಕೆಯನ್ನು ಆಕ್ಷೇಪಿಸಿರುವ 71 ನಿವೃತ್ತ ಅಧಿಕಾರಿಗಳು ಆಕೆಯ ಉಮೇದುವಾರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಪಂಜಾಬ್‌ನ ಮಾಜಿ ಡಿಜಿ ಜೂಲಿಯೊ ರಿಬೆರೊ, ಪುಣೆಯ ಮಾಜಿ ಪೊಲೀಸ್ ಆಯುಕ್ತ ಮೀರನ್ ಬೊರ್ವಾಂಕರ್ ಹಾಗೂ ಪ್ರಸಾರ ಭಾರತಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಜವಹರ್ ಸಿರ್ಕರ್ ಈ ಕುರಿತ ಹೇಳಿಕೆಗೆ ಸಹಿ ಹಾಕಿದ್ದಾರೆ.

ಪ್ರಜ್ಞಾ ದೂರು ದಾಖಲಿಸಿದರೆ ಪರಿಶೀಲನೆ: ಫಡ್ನವೀಸ್

ಈ ಮಧ್ಯೆ, ತನಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಗಿತ್ತು ಎಂದು ಹೇಳಿಕೆ ನೀಡಿರುವ ಪ್ರಜ್ಞಾ ಠಾಕೂರ್, ಈ ಬಗ್ಗೆ ದೂರು ದಾಖಲಿಸಿದರೆ ಪರಿಶೀಲಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಪ್ರಜ್ಞಾ ವಿರುದ್ಧ ದಾಖಲಾಗಿರುವ ಪ್ರಕರಣ ಸುಳ್ಳು ಎಂದು ಬಿಜೆಪಿಗೆ ವಿಶ್ವಾಸವಿದೆ. ಆದರೆ ಮಾಜಿ ಎಟಿಪಿ ಮುಖ್ಯಸ್ಥ ಹೇಮಂತ್ ಕರ್ಕರೆ ವಿರುದ್ಧ ಪ್ರಜ್ಞಾ ಹೇಳಿಕೆ ನೀಡಿರುವುದು ಸರಿಯಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News