‘ದಿ ಕಾರವಾನ್’ ಸಂಪಾದಕರಿಗೆ ಜಾಮೀನು ಮಂಜೂರು

Update: 2019-04-25 14:48 GMT

ಹೊಸದಿಲ್ಲಿ, ಎ.25: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪುತ್ರ ವಿವೇಕ್ ದೋವಲ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ‘ದಿ ಕಾರವಾನ್’ ಪತ್ರಿಕೆಯ ಸಂಪಾದಕರು ಮತ್ತು ಒಬ್ಬ ಪತ್ರಕರ್ತನಿಗೆ ದಿಲ್ಲಿ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

ಅಲ್ಲದೆ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್‌ಗೆ ದಿನದ ಮಟ್ಟಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿತು ಮತ್ತು ಮೇ 9ರಂದು ನ್ಯಾಯಾಲಯದೆದುರು ಹಾಜರಾಗುವಂತೆ ಸೂಚಿಸಿತು. ರಮೇಶ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಅವರು ನ್ಯಾಯಾಲಯದಲ್ಲಿ ಹಾಜರಾದ ದಿನದಂದು ನಡೆಯಲಿದೆ ಎಂದೂ ತಿಳಿಸಿತು.

ತೆರಿಗೆ ಮುಕ್ತವಾಗಿರುವ ಪಶ್ಚಿಮ ಕ್ಯಾರಿಬಿಯನ್ ಸಮುದ್ರದಲ್ಲಿರುವ ಕೇಮ್ಯಾನ್ ದ್ವೀಪದಲ್ಲಿ ವಿವೇಕ್ ದೋವಲ್ ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂದು ‘ದಿ ಕಾರವಾನ್’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ವಿವೇಕ್ ದೋವಲ್ ಪತ್ರಿಕೆಯ ಮುಖ್ಯ ಸಂಪಾದಕ ಪರೇಶ್‌ನಾಥ್, ವರದಿಗಾರ ಕೌಶಲ್ ಶ್ರಾಫ್ ಅವರ ವಿರುದ್ಧ ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಕೇಮ್ಯಾನ್ ದ್ವೀಪದಲ್ಲಿ ಹೂಡಿರುವ ಬಂಡವಾಳದ ಬಗ್ಗೆ ರಿಸರ್ವ್ ಬ್ಯಾಂಕ್ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದ ರಮೇಶ್ ಜೈರಾಮ್‌ರ ಹೆಸರನ್ನೂ ಪ್ರಕರಣದಲ್ಲಿ ದಾಖಲಿಸಲಾಗಿತ್ತು. ‘ಡಿ- ಕಂಪೆನಿಗಳು’ ಎಂಬ ಹೆಸರಿನಲ್ಲಿ ಜನವರಿ 16ರಂದು ಕಾರವಾನ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.

2016ರ ನವೆಂಬರ್ 8ರಂದು ಪ್ರಧಾನಿ ಮೋದಿ ಸರಕಾರ ನೋಟು ರದ್ದತಿ ಘೋಷಿಸಿದ್ದು , ಇದಕ್ಕೆ 13 ದಿನದ ಮೊದಲು ಕೇಮ್ಯಾನ್ ದ್ವೀಪದಲ್ಲಿ ವಿವೇಕ್ ದೋವಲ್ ಹೆಸರಲ್ಲಿ ಹೂಡಿಕೆ ಮಾಡಿರುವುದಾಗಿ ತಿಳಿಸುವ ದಾಖಲೆ ಪತ್ರಗಳ ಸಹಿತ ವರದಿ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News