ಪರಿಹಾರ ಧನ ಅತ್ಯಾಚಾರ ಸಂತ್ರಸ್ತರ ನೆರವಿಗೆ ಬಳಕೆ: ಬಿಲ್ಕಿಸ್ ಬಾನು

Update: 2019-04-25 15:05 GMT

ಹೊಸದಿಲ್ಲಿ, ಎ.25: ಕಳೆದ 17 ವರ್ಷಗಳಿಂದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ತಾನು ವಿಶ್ವಾಸವಿರಿಸಿಕೊಂಡಿದ್ದು, ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲಿಟ್ಟಿದ್ದ ತನ್ನ ನಂಬಿಕೆಯನ್ನು ಹೆಚ್ಚಿಸಿದೆ ಎಂದು ಬಿಲ್ಕಿಸ್ ಬಾನು ಹೇಳಿದ್ದಾರೆ.

2002ರ ಗುಜರಾತ್ ಹಿಂಸಾಚಾರ ಸಂದರ್ಭ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್ ಬಾನುಗೆ ಸರಕಾರಿ ಉದ್ಯೋಗ, ವಸತಿ ಮತ್ತು 50 ಲಕ್ಷ ರೂ. ಪರಿಹಾರ ಧನ ನೀಡುವಂತೆ ಸುಪ್ರೀಂಕೋರ್ಟ್ ಗುಜರಾತ್ ಸರಕಾರಕ್ಕೆ ಆದೇಶಿಸಿದೆ. ಇಲ್ಲಿ ತನಗೆ ದೊರೆತ ಪರಿಹಾರ ಧನದ ಮೊತ್ತ ಮುಖ್ಯವಲ್ಲ. ತಾನು ಅನುಭವಿಸಿದ ಯಾತನೆ ನ್ಯಾಯಾಲಯಕ್ಕೆ ಅರ್ಥವಾಗಿದೆ ಎಂಬುದು ಮುಖ್ಯವಾಗಿದೆ ಎಂದು ಬುಧವಾರ ದಿಲ್ಲಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಬಾನು ಹೇಳಿದರು.

ತನಗೆ ದೊರೆತಿರುವ ಪರಿಹಾರ ಧನದ ಒಂದು ಭಾಗವನ್ನು ಬಳಸಿಕೊಂಡು ಅತ್ಯಾಚಾರ ಮತ್ತು ಕೋಮುಗಲಭೆ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸಲು ಯೋಚಿಸಿದ್ದೇನೆ. ಈ ನಿಧಿಗೆ ಕೋಮುಗಲಭೆಯಲ್ಲಿ ಮೃತಪಟ್ಟ ತನ್ನ ಮೂರು ವರ್ಷದ ಮಗಳು ಸಲೇಹಾರ ಹೆಸರನ್ನು ಇಡಲಾಗುವುದು. “ಮಗಳ ಮೃತದೇಹವೂ ನಮಗೆ ದೊರೆತಿಲ್ಲ. ಅವಳ ಅಂತ್ಯಸಂಸ್ಕಾರ ನಡೆಸಲೂ ನಮ್ಮಿಂದಾಗಲಿಲ್ಲ ಎಂಬ ದುಃಖ ಇಂದಿಗೂ ಬಾಧಿಸುತ್ತಿದೆ. ನ್ಯಾಯಾಲಯದ ತೀರ್ಪಿನಿಂದ ತುಸು ನೆಮ್ಮದಿಯಾಗಿದೆ” ಎಂದು ಹೇಳಿದ್ದಾರೆ.

ಇನ್ನು ಮುಂದೆ ತನ್ನ, ಪತಿಯ ಮತ್ತು ಮಕ್ಕಳ ಜೀವನದ ಬಗ್ಗೆ ಯೋಚಿಸುತ್ತೇನೆ. ಹಿಂಸೆಯ ಸಂತ್ರಸ್ತರ ಪ್ರಕರಣದಲ್ಲಿ ಹೋರಾಟ ನಡೆಸುವ ಉದ್ದೇಶದಿಂದ ಮಗಳು ವಕೀಲೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾಳೆ. ಅವಳ ನಿರ್ಧಾರಕ್ಕೆ ನಮ್ಮ ಸಮ್ಮತಿಯಿದೆ ಎಂದು ಬಿಲ್ಕಿಸ್ ಬಾನು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News