ದೇಶ ಇನ್ನೂ ಅಸುರಕ್ಷಿತ, ಮತ ಚಲಾಯಿಸಲು ಮನಸ್ಸಿಲ್ಲ: ನಿರ್ಭಯಾ ಹೆತ್ತವರು

Update: 2019-04-25 16:24 GMT

ಹೊಸದಿಲ್ಲಿ,ಎ.25: ದಿಲ್ಲಿಯಲ್ಲಿ ಚುನಾವಣಾ ಪ್ರಚಾರ ಕಾವೇರುತ್ತಿದೆ,ಆದರೆ ಏಳು ವರ್ಷಗಳ ಹಿಂದೆ ಇಡೀ ದೇಶವನ್ನೇ ನಡುಗಿಸಿದ್ದ ಸಾಮೂಹಿಕ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ತಮ್ಮ ಪುತ್ರಿಯನ್ನು ಕಳೆದುಕೊಂಡಿರುವ ‘ನಿರ್ಭಯಾ’ ಹೆತ್ತವರಿಗೆ ಈ ಬಗ್ಗೆ ಯಾವುದೇ ಆಸಕ್ತಿಯಿದ್ದಂತಿಲ್ಲ. ಈ ಬಾರಿ ಚುನಾವಣೆಯಲ್ಲಿ ಮತ ಚಲಾಯಿಸುವ ಮನಸ್ಸೇ ತಮಗಿಲ್ಲ ಎಂದು ಅವರು ಹೇಳಿದ್ದಾರೆ.

ತಮಗೆ ನ್ಯಾಯದ ಭರವಸೆ ನೀಡುತ್ತಿರುವ ಮತ್ತು ಆ ಬಗ್ಗೆ ಏನನ್ನೂ ಮಾಡದೇ ನಿರ್ಲಿಪ್ತವಾಗಿರುವ ರಾಜಕೀಯ ಪಕ್ಷಗಳಿಂದ ತಾವು ರೋಸಿ ಹೋಗಿದ್ದೇವೆ. ದುಷ್ಕರ್ಮಿಗಳು ಇನ್ನೂ ಬದುಕಿದ್ದಾರೆ, ಹೀಗಾಗಿ ಪಕ್ಷಗಳು ವ್ಯಕ್ತಪಡಿಸಿದ ಸಹಾನುಭೂತಿ ಮತ್ತು ಅವುಗಳ ಭರವಸೆಗಳು ಕೇವಲ ರಾಜಕೀಯ ತಂತ್ರಗಳಾಗಿವೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಬದ್ರಿನಾಥ ಸಿಂಗ್-ಆಶಾ ದೇವಿ ದಂಪತಿ ಹೇಳಿದರು. 2012,ಡಿ.16ರಂದು ರಾತ್ರಿ ದಿಲ್ಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕ್ರೂರವಾಗಿ ಹಿಂಸಿಸಲ್ಪಟ್ಟಿದ್ದ ನಿರ್ಭಯಾ 11 ದಿನಗಳ ಬಳಿಕ ಸಿಂಗಾಪುರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.

ನಗರದ ರಸ್ತೆಗಳು ಇನ್ನೂ ಮಹಿಳೆಯರು ಮತ್ತು ಮಕ್ಕಳಿಗೆ ಅಸುರಕ್ಷಿತವಾಗಿವೆ. ಸಿಸಿಟಿವಿ ಕ್ಯಾಮರಾಗಳನ್ನು ಇನ್ನಷ್ಟೇ ಅಳವಡಿಸಬೇಕಿದೆ. ದೇಶವು ಇನ್ನೂ ಅಸುರಕ್ಷಿತವಾಗಿದೆ. ತಮ್ಮ ಪುತ್ರಿಯರು ಮನೆಗೆ ಮರಳುವವರೆಗೆ ತಾಯಂದಿರು ಕಳವಳ ಪಡುತ್ತಲೇ ಇದ್ದಾರೆ ಎಂದ ಆಶಾ ದೇವಿ,ಜನರು ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಎಲ್ಲ ಸರಕಾರಗಳು ನಮ್ಮನ್ನು ನಿರಾಶರಾಗಿಸಿವೆ. ಈ ಬಾರಿ ಯಾವುದೇ ಪಕ್ಷಕ್ಕೆ ಮತ ನೀಡುವ ಮನಸ್ಸು ತನಗಿಲ್ಲ. ತನ್ನ ಪುತ್ರಿ ಅಮಾನುಷ ಕೃತ್ಯಕ್ಕೆ ಬಲಿಯಾಗಿ ಏಳು ವರ್ಷಗಳು ಉರುಳಿವೆ. ಆದರೆ ಮರಣ ದಂಡನೆಯ ತೀರ್ಪು ಇನ್ನೂ ಜಾರಿಯಾಗಿಲ್ಲ ಎಂದರು.

ಯಾವುದೂ ಬದಲಾಗಿಲ್ಲ, ಈ ಬಾರಿ ಮತ ಚಲಾಯಿಸುತ್ತೇನೆ ಎಂದು ತಾನು ಅಂದುಕೊಂಡಿಲ್ಲ. ವ್ಯವಸ್ಥೆಯಲ್ಲಿನ ತನ್ನ ನಂಬಿಕೆ ನಶಿಸುತ್ತಿದೆ ಎಂದ ಸಿಂಗ್,ಎಲ್ಲ ಪಕ್ಷಗಳೂ ಮಹಿಳೆಯರ ಘನತೆ ಮತ್ತು ಸಬಲೀಕರಣದ ಬಗ್ಗೆ ಮಾತನಾಡುತ್ತಿವೆ. ಆದರೆ ಅದಕ್ಕಾಗಿ ಯಾವುದೇ ಮಾರ್ಗಸೂಚಿಯನ್ನು ಹೊಂದಿಲ್ಲ ಮತ್ತು ತಮ್ಮ ಭರವಸೆಗಳನ್ನು ಈಡೇರಿಸುವ ಇಚ್ಛಾಶಕ್ತಿಯೂ ಅವುಗಳಿಗೆ ಇಲ್ಲ ಎಂದು ವಿಷಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News