ಪ್ರಜ್ಞಾ ಸಿಂಗ್ ವಿರುದ್ಧ ಕರ್ಕರೆಯ ನಿಕಟವರ್ತಿ ಮಾಜಿ ಪೊಲೀಸ್ ಅಧಿಕಾರಿ ಸ್ಪರ್ಧೆ

Update: 2019-04-25 16:49 GMT

ಹೊಸದಿಲ್ಲಿ, ಎ. 25: ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ತಂಡದ ಮಾಜಿ ವರಿಷ್ಠ ಹೇಮಂತ್ ಕರ್ಕರೆ ಅವರ ಕೈ ಜೊತೆ ಕೆಲಸ ಮಾಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಭೋಪಾಲ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಸ್ವರ್ಧಿಸಲು ನಿರ್ಧರಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ತಾನು ನಾಮಪತ್ರ ಸಲ್ಲಿಸಿದ್ದೇನೆ ಎಂದು ನಿವೃತ್ತ ಉಪ ಪೊಲೀಸ್ ಆಯುಕ್ತ ರಿಯಾಝ್ ದೇಶ್‌ಮುಖ್ ಹೇಳಿದ್ದಾರೆ. ಐದನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಭೋಪಾಲದಲ್ಲಿ ಮೇ 12ರಂದು ಮತದಾನ ನಡೆಯಲಿದೆ. ದೇಶ್‌ಮುಖ್ ಅವರು ಪ್ರಸ್ತುತ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನೆಲೆಸಿದ್ದಾರೆ. ‘‘ಮಹಾರಾಷ್ಟ್ರದ ಅತ್ಯುತ್ತಮ ಹಾಗೂ ನೇರ ನಡೆನುಡಿಯ ಅಧಿಕಾರಿಗಳಲ್ಲಿ ಒಬ್ಬರಾದ ಕರ್ಕರೆ ಅವರನ್ನು ದೂಷಿಸುವುದನ್ನು ನಾನು ನೋಡಲಾರೆ. ಆದುದರಿಂದ ನಾನು ಅವರ (ಪ್ರಜ್ಞಾ ಸಿಂಗ್ ಠಾಕೂರ್) ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದೆ’’ ಎಂದು ದೇಶ್‌ಮುಖ್ ಹೇಳಿದ್ದಾರೆ.

“ನನ್ನ ಎಲ್ಲ ವೃತ್ತಿ ಸಂಬಂಧಿ ವಿಚಾರಗಳಲ್ಲಿ ಕರ್ಕರೆ ಅವರು ಸಲಹೆ ನೀಡುತ್ತಿದ್ದರು. ಅಲ್ಲದೆ, ಯಾವಾಗಲೂ ನನಗೆ ಬೆಂಬಲವಾಗಿ ನಿಲ್ಲುತ್ತಿದ್ದರು” ಎಂದು ಅವರು ತಿಳಿಸಿದ್ದಾರೆ. ನಿವೃತ್ತರಾದ ಬಳಿಕ ದೇಶ್‌ಮುಖ್ ಅವರು ವೆಬ್‌ಪೋರ್ಟಲ್ ಆರಂಭಿಸಿದ್ದರು. ಅಲ್ಲಿ ನಾಗರಿಕರು ಹಾಗೂ ಸೇವೆಯಲ್ಲಿರುವ ಪೊಲೀಸ್ ಅಧಿಕಾರಿಗಳ ಕಾನೂನು ಪ್ರಕರಣಗಳಿಗೆ ಸಮಾಲೋಚನೆಯ ಸೇವೆ ನೀಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News