ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅದಕ್ಕೆ ರಾಹುಲ್ ಕಾರಣ: ಕೇಜ್ರಿವಾಲ್

Update: 2019-04-25 16:53 GMT

ಹೊಸದಿಲ್ಲಿ, ಎ. 25: ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅದಕ್ಕೆ ಜವಾಬ್ದಾರಿಯಾಗುವ ಏಕೈಕ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ದಿಲ್ಲಿಯ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಆಪ್ ಮೈತ್ರಿ ಮಾಡಿಕೊಳ್ಳಲು ವಿಫಲವಾದ ಬಳಿಕ ಅರವಿಂದ ಕೇಜ್ರಿವಾಲ್ ಅವರು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದಿಲ್ಲಿಯಲ್ಲಿರುವ ಜನರಿಗೆ ಕಾಲೇಜು ಹಾಗೂ ಉದ್ಯೋಗಗಳಲ್ಲಿ ಶೇ. 85 ಮೀಸಲಾತಿ ಭರವಸೆ ನೀಡುವ ಆಪ್‌ನ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಅವರು ಮಾತನಾಡಿದರು.

ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಆಪ್ ಕನಸು ಕಂಡಿಲ್ಲ. ಆದರೆ, ದೇಶವನ್ನು ರಕ್ಷಿಸಲು ಒಪ್ಪಿಕೊಂಡಿತ್ತು ಎಂದು ಕೇಜ್ರಿವಾಲ್ ಹೇಳಿದ್ದಾರೆ. “ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ನನ್ನಿಂದಾದಷ್ಟು ಪ್ರಯತ್ನ ಮಾಡಿದೆ ಎಂದು ನಾನು ಹೇಳಬಲ್ಲೆ. ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಅದಕ್ಕೆ ಓರ್ವ ವ್ಯಕ್ತಿ ಜವಾಬ್ದಾರಿಯಾಗಲಿದ್ದಾರೆ. ಅವರು ರಾಹುಲ್ ಗಾಂಧಿ ಆಗಿರಲಿದ್ದಾರೆ” ಎಂದು ಅವರು ನುಡಿದಿದ್ದಾರೆ.

ಟ್ವಿಟ್ಟರ್‌ನಲ್ಲಿ ಯಾವ ಮೈತ್ರಿ ರೂಪಿಸಲಾಗಿದೆ ಎಂದು ನಾನು ರಾಹುಲ್ ಗಾಂಧಿ ಅವರಲ್ಲಿ ಕೇಳಲು ಬಯಸುತ್ತೇನೆ. ಅವರು ಮೈತ್ರಿ ರೂಪಿಸುವ ವಿಚಾರದಲ್ಲಿ ಗಂಭೀರವಾಗಿದ್ದರೆ, ಮಾತುಕತೆಗೆ ಬರಬೇಕು. ಬಹಿರಂಗವಾಗಿ ಹೇಳಿಕೆ ನೀಡುವುದರಿಂದ ಸಮಸ್ಯೆ ಪರಿಹಾರವಾಗದು ಎಂದು ಅವರು ಹೇಳಿದರು. ಆಪ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಕೊನೆ ಕ್ಷಣದ ವರೆಗೆ ಪ್ರಯತ್ನಿಸಲಾಗುವುದು ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಇದು ಸುಮ್ಮನೆ ಹೇಳುತ್ತಿರುವುದು, ಅವರಿಗೆ ಯಾವದೇ ಉದ್ದೇಶ ಇಲ್ಲ ಎಂದಿದ್ದಾರೆ.

‘‘ದಿಲ್ಲಿಯಲ್ಲಿ ಕಾಂಗ್ರೆಸ್ ಜಯ ಗಳಿಸದು. ದಿಲ್ಲಿಯಲ್ಲಿ ಕಾಂಗ್ರೆಸ್ ಜಯ ಗಳಿಸುವ ಸ್ಥಿತಿಯಲ್ಲಿ ಇದ್ದರೆ, ನಾನು ಎಲ್ಲ 7 ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಸಿದ್ಧ. ಆದರೆ ಕಾಂಗ್ರೆಸ್‌ನೊಂದಿಗೆ 4:5 ಮೈತ್ರಿ ಮಾಡಿಕೊಂಡರೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಂತೆ ಆಗುತ್ತದೆ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News