ಬಿಜೆಪಿಯಿಂದ ಕೋಮು ರಾಜಕೀಯ: ಶಬಾನಾ ಅಜ್ಮಿ

Update: 2019-04-26 03:37 GMT

ಬೆಗುಸರಾಯ್, ಎ. 26: ನಿರುದ್ಯೋಗ ಸಮಸ್ಯೆ, ಮಹಿಳೆಯರನ್ನು ಕಾಡುತ್ತಿರುವ ಅಭದ್ರತೆ ಮತ್ತು ಹಿಂದಿನ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ವಿಫಲವಾಗಿರುವ ಬಿಜೆಪಿ, ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಕೋಮು ರಾಜಕೀಯದಲ್ಲಿ ತೊಡಗಿದೆ ಎಂದು ಖ್ಯಾತ ಬಾಲಿವುಡ್ ನಟಿ ಶಬಾನಾ ಅಜ್ಮಿ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಸ್ಪರ್ಧಿಸುತ್ತಿರುವ ಸಿಪಿಐ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "ಬಿಜೆಪಿಯ ಭರವಸೆಗಳು ಕೇವಲ ಜುಮ್ಲಾ ಎಂದು ಮನವರಿಕೆಯಾಗಿ ಆ ಪಕ್ಷದ ನಿಜ ಬಣ್ಣ ಬಯಲಾಗಲು ಹೆಚ್ಚಿನ ಸಮಯ ಬೇಡ; ಈ ಕಾರಣದಿಂದ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಹಳೆ ಚಾಳಿಯನ್ನು ಮುಂದುವರಿಸಿದೆ" ಎಂದು ಆರೋಪ ಮಾಡಿದರು.

ಸಾಮಾಜಿಕ ಚಳವಳಿಯಲ್ಲೂ ತೊಡಗಿಸಿಕೊಂಡಿರುವ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ತಮ್ಮ ತಂದೆ ಹಾಗೂ ಕವಿ ಕೈಫಿ ಅಜ್ಮಿ ಹಾಗೂ ಸಿಬಿಐ ನಡುವಿನ ಸಂಬಂಧವನ್ನು ನೆನಪಿಸಿಕೊಂಡರು. ಪಕ್ಷದ ಸದಸ್ಯತ್ವ ಕಾರ್ಡನ್ನು ತಂದೆ ಅತ್ಯಮೂಲ್ಯ ಎಂದು ಪರಿಗಣಿಸಿದ್ದರು. ಅದನ್ನು ಸದಾ ಜೇಬಿನಲ್ಲೇ ಇಟ್ಟುಕೊಳ್ಳುತ್ತಿದ್ದರು ಎಂದು ಹೇಳಿದರು.

"ಅವರ ಪ್ರಗತಿಪರ ಮೌಲ್ಯಗಳನ್ನು ಮಕ್ಕಳಾಗಿದ್ದಾಗಲೇ ನಮ್ಮಲ್ಲಿ ಬಿತ್ತಿದರು. ಅವರು ನಮಗೆ ಜೀವನ ನೀಡಿದರು; ಸೀಮಿತ ಸಂಪತ್ತಿನ ನಡುವೆಯೂ ನಮಗೆ ಜೀವನ ಶ್ರೀಮಂತಿಕೆ ನೀಡಿದರು. ಇದು ಎಡಪಂಥೀಯ ಚಳವಳಿಯ ಜತೆಗಿದ್ದವರ ವೈಶಿಷ್ಟ್ಯ. ಕಕನ್ಹಯ್ಯಾ ಕೂಡಾ ಅದನ್ನೇ ಪ್ರತಿನಿಧಿಸುತ್ತಿದ್ದಾರೆ" ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News