ಮಹಿಳಾ ಸೈನಿಕರ ನೇಮಕಾತಿ ಪ್ರಕ್ರಿಯೆ ಶುರು

Update: 2019-04-26 05:00 GMT

ಹೊಸದಿಲ್ಲಿ, ಎ. 26: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಸೈನಿಕರನ್ನು ದೊಡ್ಡ ಪ್ರಮಾಣದಲ್ಲಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಭಾರತೀಯ ಸೇನೆ ಗುರುವಾರ ಆರಂಭಿಸಿದೆ.

ಒಟ್ಟು ಸೈನಿಕರ ಪೈಕಿ ಶೇಕಡ 20ರಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳುವುದು ಸೇನೆಯ ಗುರಿಯಾಗಿದೆ.

ಸಶಸ್ತ್ರ ಪಡೆಗಳ ಅಧಿಕಾರಿ ಹುದ್ದೆಗಳಿಗೆ ಮಾತ್ರ ಇದುವರೆಗೆ ಮಹಿಳೆಯರನ್ನು ನೇಮಿಸಿಕೊಳ್ಳಲಾಗಿತ್ತು ಹಾಗೂ ಇನ್‌ಫ್ಯಾಂಟ್ರಿ, ಸಶಸ್ತ್ರ ಪಡೆ ಮತ್ತು ಫಿರಂಗಿದಳ ಅಥವಾ ಯುದ್ಧ ಕಾರ್ಯಾಚರಣೆ ವಿಭಾಗಕ್ಕೆ ಸೇರಲು ಮಹಿಳೆಯರಿಗೆ ಅವಕಾಶ ಇರಲಿಲ್ಲ. ಭಾರತೀಯ ಸೇನೆಯಲ್ಲಿ ಇದುವರೆಗೆ ಕೇವಲ 1500 ಮಂದಿ ಮಹಿಳೆಯರಿದ್ದಾರೆ. ವಾಯುಪಡೆಯಲ್ಲಿ 1600 ಹಾಗೂ ನೌಕಾಪಡೆಯಲ್ಲಿ 500 ಮಂದಿಯಷ್ಟೇ ಮಹಿಳೆಯರಿದ್ದಾರೆ. ಸಶಸ್ತ್ರ ಪಡೆಗಳ ಒಟ್ಟು ಬಲ 14 ಲಕ್ಷ ಆಗಿದ್ದು, ಈ ಪೈಕಿ 65 ಸಾವಿರ ಮಂದಿ ಅಧಿಕಾರಿ ಶ್ರೇಣಿಯವರು.

ಮಹಿಳೆಯರನ್ನು ಸೈನಿಕರನ್ನಾಗಿ ಅಥವಾ ಅಧಿಕಾರಿ ಶ್ರೇಣಿಯ ಹುದ್ದೆಗಿಂತ ಕೆಳಹಂತದ ಸಿಬ್ಬಂದಿಯಾಗಿ 2019ರಿಂದ ನೇಮಕ ಮಾಡಿಕೊಳ್ಳುವ ನಿರ್ಧಾರವನ್ನು ಸರ್ಕಾರ ಕಳೆದ ವರ್ಷ ಪ್ರಕಟಿಸಿತ್ತು.

ಪ್ರಸ್ತುತ ಹಂತದಲ್ಲಿ ಸುಮಾರು 800 ಮಂದಿ ಮಹಿಳೆಯರನ್ನು ಮಿಲಿಟರಿ ಪೊಲೀಸ್ ವಿಭಾಗದಲ್ಲಿ ನೇಮಕ ಮಾಡಿಕೊಳ್ಳಲು ಸೇನೆ ಉದ್ದೇಶಿಸಿದೆ. ಜತೆಗೆ ವಾರ್ಷಿಕ 50 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸೇನೆಯ ವಿಧಿವಿಧಾನಗಳಲ್ಲಿ ಉತ್ತಮ ವ್ಯವಸ್ಥೆಯನ್ನು ರೂಪಿಸುವ ಸಲುವಾಗಿ ಮತ್ತು ಶಿಸ್ತು ರೂಢಿಸುವ ನಿಟ್ಟಿನಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳದಂಥ ಆರೋಪಗಳ ಬಗ್ಗೆ ತನಿಖೆಗೆ ಸಹಕರಿಸುವುದು ಮಿಲಿಟರಿ ಪೊಲೀಸ್ ವಿಭಾಗಕ್ಕೆ ಸೇರಿಕೊಂಡ ಮಹಿಳೆಯರ ಜವಾಬ್ದಾರಿಯಾಗಿರುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಈ ನಿಟ್ಟಿನಲ್ಲಿ ಸೇನೆ ಗುರುವಾರ ಮಿಲಿಟರಿ ಪೊಲೀಸ್ ಪಡೆಗೆ ನೇಮಕಾತಿಗಾಗಿ ಆನ್‌ಲೈನ್ ನೋಂದಣಿಯನ್ನು ಆರಂಭಿಸಿದೆ. ಅರ್ಜಿ ಸಲ್ಲಿಕೆಗೆ ಜೂನ್ 8 ಕೊನೆಯ ದಿನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News