ಐದು ವರ್ಷಗಳಲ್ಲಿ ಶೇ.52 ಏರಿಕೆಯಾದ ಮೋದಿ ಆಸ್ತಿ
ಹೊಸದಿಲ್ಲಿ,ಎ.26: 2014ಕ್ಕೆ ಹೋಲಿಸಿದರೆ ಪ್ರಧಾನಿ ಮೋದಿಯ ಚರಾಸ್ತಿ 2019ರ ವೇಳೆಗೆ ಶೇ.52 ಏರಿಕೆ ಕಂಡಿದೆ. ಈ ಅಂಕಿಅಂಶ ಮೋದಿ ಶುಕ್ರವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ನೀಡಿದ ಅಫಿದಾವಿತ್‌ನಲ್ಲಿ ಬಯಲಾಗಿದೆ.
ಅಫಿದಾವಿತ್‌ನಲ್ಲಿ ಮೋದಿ, ತನ್ನ ಬಳಿ ಒಟ್ಟಾರೆ 2.51 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಈ ಪೈಕಿ ಚರಾಸ್ತಿ ಮೌಲ್ಯ 1,41,36,119 ರೂ. (1.41 ಕೋಟಿ ರೂ.) ಮತ್ತು ಸ್ಥಿರಾಸ್ತಿ ಮೊತ್ತ ಅಂದಾಜು 1.10 ಕೋಟಿ ರೂ. ಹಾಗೂ 38,750 ರೂ. ನಗದು ಹೊಂದಿರುವುದಾಗಿ ತಿಳಿಸಿದ್ದಾರೆ.
ಪ್ರಧಾನಿ 20,000ರೂ. ತೆರಿಗೆ ಉಳಿತಾಯ ಇಂಫ್ರಾ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದರೆ 7.61 ಲಕ್ಷ ರೂ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಮತ್ತು 1.9 ಲಕ್ಷ ರೂ. ಜೀವವಿಮೆ ಪಾಲಿಸಿಗಳಲ್ಲಿ ತೊಡಗಿಸಿದ್ದಾರೆ.
ಉಳಿತಾಯ ಖಾತೆಯಲ್ಲಿ 4,143 ರೂ. ನಗದು ಹೊಂದಿರುವ ಮೋದಿ ಬಳಿ 45 ಗ್ರಾಂ. ತೂಗುವ 1.13 ಲಕ್ಷ ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. ಗುಜರಾತ್‌ನಲ್ಲಿ ಗಾಂಧಿನಗರದಲ್ಲಿ 3,531ಚ.ಅಡಿಯ ನಿವೇಶನ ಹೊಂದಿದ್ದು ಒಂದು ಮನೆಯನ್ನು ಹೊಂದಿದ್ದಾರೆ. ಈ ಆಸ್ತಿಯ ಮೌಲ್ಯ 1.1 ಕೋ.ರೂ.ಆಗಿದೆ ಎಂದು ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ.
ಸರಕಾರದ ಸಂಬಳ ಮತ್ತು ಬ್ಯಾಂಕ್‌ನಿಂದ ಪಡೆಯುವ ಬಡ್ಡಿಯೇ ತನ್ನ ಆದಾಯದ ಮೂಲ ಎಂದು ಮೋದಿ ಅಫಿದಾವಿತ್‌ನಲ್ಲಿ ತಿಳಿಸಿದ್ದಾರೆ. 2014ರಲ್ಲಿ ಮೋದಿ ಬಳಿ 32,700 ರೂ. ನಗದು, ಬ್ಯಾಂಕ್ ಉಳಿತಾಯ ಖಾತೆಯಲ್ಲಿ 26.05 ಲಕ್ಷ ರೂ. ಹಾಗೂ 32.48 ಲಕ್ಷ ರೂ. ನಿರಖು ಠೇವಣಿ ಹೊಂದಿದ್ದರು.
ತನ್ನ ಅಫಿದಾವಿತ್‌ನಲ್ಲಿ ಜಶೋದಬೆನ್ ಅವರನ್ನು ತನ್ನ ಪತ್ನಿ ಎಂದು ಹೆಸರಿಸಿರುವ ಮೋದಿ 1983ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿ ಪಡೆದಿರುವುದಾಗಿ ತಿಳಿಸಿದ್ದಾರೆ. 1967ರಲ್ಲಿ ಗುಜರಾತ್ ಮಂಡಳಿಯ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು 1978ರಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಲಾ ವಿಭಾಗದಲ್ಲಿ ಪದವಿ ಪೂರೈಸಿರುವುದಾಗಿ ಮೋದಿ ತಿಳಿಸಿದ್ದಾರೆ.