30 ವರ್ಷದಿಂದ ನವಜಾತ ಶಿಶು ಮಾರಾಟ ಮಾಡುತ್ತಿದ್ದೆ ಎಂಬ ನರ್ಸ್ ಹೇಳಿಕೆಯ ವೀಡಿಯೊ ವೈರಲ್

Update: 2019-04-26 16:13 GMT

ಚೆನ್ನೈ, ಎ.26: ಕಳೆದ 30 ವರ್ಷದಿಂದ ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿದ್ದೆ ಎಂದು ಸರಕಾರಿ ಆಸ್ಪತ್ರೆಯ ಮಾಜಿ ನರ್ಸ್ ಹೇಳಿಕೆಯ ವೀಡಿಯೊ ವೈರಲ್ ಆಗಿದ್ದು, ಈ ಬಗ್ಗೆ ತನಿಖೆಗೆ ಸರಕಾರ ಸೂಚಿಸಿದೆ.

ಮಹಿಳಾ ನರ್ಸ್‌ಳನ್ನು ಅಮೃತವಲ್ಲಿ ಎಂದು ಗುರುತಿಸಲಾಗಿದ್ದು, ಆಕೆ ಹಾಗೂ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಡಿಯೊ ಕ್ಲಿಪ್ ಬಗ್ಗೆ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಅಮೃತವಲ್ಲಿ ಧರ್ಮಪುರಿಯ ವ್ಯಕ್ತಿಯೊಂದಿಗೆ ನವಜಾತ ಶಿಶುಗಳ ಮಾರಾಟದ ಬಗ್ಗೆ ವ್ಯವಹಾರ ನಡೆಸುತ್ತಿರುವುದು ಕೇಳಿ ಬಂದಿದೆ. ಕಳೆದ 30 ವರ್ಷದಿಂದ ಈ ವ್ಯವಹಾರ ನಡೆಸುತ್ತಿದ್ದೇನೆ. ದೇವರ ದಯೆಯಿಂದ ಇದುವರೆಗೆ ಯಾವುದೇ ಸಮಸ್ಯೆಯಾಗಿಲ್ಲ.

ನಿಮಗೆ ಸಾಧ್ಯವಿದ್ದಷ್ಟು ಮೊತ್ತವನ್ನು ಮುಂಗಡವಾಗಿ ನೀಡಿದರೆ ಮಗುವಿನ ಫೋಟೋವನ್ನು ವಾಟ್ಸಾಪ್‌ನಲ್ಲಿ ಕಳಿಸುತ್ತೇನೆ ಎಂದು ಮಹಿಳೆ ಹೇಳಿದ್ದಾಳೆ. ಗಂಡು ಅಥವಾ ಹೆಣ್ಣು ಯಾವ ಮಗುವಾದರೂ ತೊಂದರೆಯಿಲ್ಲ ಎಂದು ಆ ವ್ಯಕ್ತಿ ಹೇಳಿದಾಗ ಮಹಿಳೆ- ಹೆಣ್ಣು ಮಗು ಬೇಕಿದ್ದರೆ 2.70 ಲಕ್ಷ ರೂ, ಮಗು 3 ಕಿಲೋ ದೇಹತೂಕ ಹೊಂದಿದ್ದರೆ ಆಗ 3 ಲಕ್ಷ ರೂ, ಅಮುಲ್ ಬೇಬಿ(ಆರೋಗ್ಯವಂತ ಗಂಡು ಮಗು) ಬೇಕಿದ್ದರೆ 4ರಿಂದ 4.15 ಲಕ್ಷ ರೂ, ,ಮಗುವಿನ ಬಣ್ಣ ಕಪ್ಪಾಗಿದ್ದರೆ ಆಗ ಬೆಲೆ 3.30ರಿಂದ 3.75 ಲಕ್ಷಕ್ಕೆ ಇಳಿಯುತ್ತದೆ ಎಂದು ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಮಗುವಿನ ಜೊತೆಗೆ ಜನನ ಪ್ರಮಾಣ ಪತ್ರ ಹಾಗೂ ಇತರ ನಕಲಿ ದಾಖಲೆಗಳನ್ನೂ ಒದಗಿಸುವುದಾಗಿ ಮಹಿಳೆ ಹೇಳಿದ್ದಾಳೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು ಅಮೃತವಲ್ಲಿ ಇದರ ಒಂದು ಭಾಗವಾಗಿದ್ದಾಳೆ. ಅವಳು ಮಗುವನ್ನು ನೇರವಾಗಿ ಮಾರಾಟ ಮಾಡುತ್ತಿರಲಿಲ್ಲ. ಇಲ್ಲಿ ಮಧ್ಯವರ್ತಿಗಳು, ದಲ್ಲಾಳಿಗಳಿದ್ದಾರೆ. ಅಮೃತವಲ್ಲಿಗೆ ಮಗುವನ್ನು ಮಾರಿದ ಕುಟುಂಬವನ್ನು ಮೊದಲು ಪತ್ತೆಹಚ್ಚಿ ಆ ಬಳಿಕ ಜಾಲದ ಹಿಂದಿರುವ ಶಕ್ತಿಗಳನ್ನು ಪತ್ತೆ ಮಾಡಲಾಗುವುದು ಎಂದು ನಮಕ್ಕಲ್ ಪೊಲೀಸ್ ಅಧೀಕ್ಷಕ ಅರಾ ಅರುಳರಸು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News