×
Ad

ನೌಕಾದಳದ ಮುಖ್ಯಸ್ಥರ ನೇಮಕ ಪ್ರಕರಣ: 3 ವಾರದೊಳಗೆ ಉತ್ತರಿಸುವಂತೆ ಕೇಂದ್ರಕ್ಕೆ ಸೂಚನೆ

Update: 2019-04-26 21:42 IST

ಹೊಸದಿಲ್ಲಿ, ಎ.26: ಸೇವಾ ಹಿರಿತವನ್ನು ಕಡೆಗಣಿಸಿ ವೈಸ್ ಅಡ್ಮಿರಲ್ ಕರಮ್‌ಬೀರ್ ಸಿಂಗ್‌ರನ್ನು ನೌಕಾಪಡೆಯ ಮುಖ್ಯಸ್ಥರನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಸಲ್ಲಿಸಿರುವ ಅರ್ಜಿಯ ಕುರಿತು ಮೂರು ವಾರದೊಳಗೆ ಉತ್ತರಿಸುವಂತೆ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ರಕ್ಷಣಾ ಸಚಿವಾಲಯಕ್ಕೆ ಸೂಚಿಸಿದೆ.

ನೌಕಾದಳದ ಅತ್ಯಂತ ಹಿರಿಯ ಕಮಾಂಡರ್ ಆಗಿರುವ ವರ್ಮಾ ಎಪ್ರಿಲ್ 8ರಂದು ಟ್ರಿಬ್ಯೂನಲ್‌ಗೆ ಅರ್ಜಿ ಸಲ್ಲಿಸಿದ್ದರು. ಮೊದಲು ಆಂತರಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ಎಂಬ ಟ್ರಿಬ್ಯೂನಲ್‌ನ ಸಲಹೆಯಂತೆ ಅರ್ಜಿಯನ್ನು ವಾಪಾಸು ಪಡೆದು ಬಳಿಕ ಎಪ್ರಿಲ್ 10ರಂದು ರಕ್ಷಣಾ ಇಲಾಖೆಗೆ ದೂರು ಸಲ್ಲಿಸಿ 10 ದಿನದ ಒಳಗೆ ಉತ್ತರಿಸುವಂತೆ ಕೋರಿದ್ದರು. ಈ ಅರ್ಜಿಗೆ ರಕ್ಷಣಾ ಇಲಾಖೆಯಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಎಪ್ರಿಲ್ 23ರಂದು ಮತ್ತೆ ಟ್ರಿಬ್ಯೂನಲ್‌ಗೆ ಅರ್ಜಿ ಸಲ್ಲಿಸಿದ್ದರು.

ಸರಕಾರ ನಾಲ್ಕು ವಾರಗಳ ಅವಕಾಶ ಕೇಳಿತ್ತು. ಆದರೆ ಮೇ 15ರೊಳಗೆ ವೈಸ್ ಅಡ್ಮಿರಲ್ ವರ್ಮಾರ ಅರ್ಜಿಯನ್ನು ವಿಲೇವಾರಿ ಮಾಡಬೇಕು ಎಂದು ಸರಕಾರಕ್ಕೆ ಸೂಚಿಸಲಾಗಿದ್ದು ಮುಂದಿನ ವಿಚಾರಣೆಯನ್ನು ಮೇ 20ಕ್ಕೆ ನಿಗದಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನೌಕಾದಳದ ಹಾಲಿ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಮೇ 31ರಂದು ನಿವೃತ್ತಿಯಾಗಲಿದ್ದು ಅವರ ಸ್ಥಾನದಲ್ಲಿ ವೈಸ್ ಅಡ್ಮಿರಲ್ ಕರಮ್‌ಬೀರ್ ಸಿಂಗ್‌ರನ್ನು ಸರಕಾರ ನೇಮಿಸಿದೆ. ಸೇವಾ ಹಿರಿತನವನ್ನು ಕಡೆಗಣಿಸಿರುವ ಬಗ್ಗೆ ಅಡ್ಮಿರಲ್ ವರ್ಮಾ ಆಕ್ಷೇಪಿಸಿದ್ದರು. ಆದರೆ ಸೇವಾ ಹಿರಿತನದ ಆಧಾರದಲ್ಲಿ ನೇಮಿಸುವ ಸಂಪ್ರದಾಯವನ್ನು ಬದಿಗಿಟ್ಟು ಅರ್ಹತೆ ಆಧಾರದಲ್ಲಿ ನೇಮಿಸಲಾಗಿದೆ ಎಂದು ಸರಕಾರ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News