×
Ad

ಚುನಾವಣಾ ಆಯೋಗದಿಂದ ಉದ್ಧಟತನದ ಕ್ರಮ: ಮೋದಿ ಹೆಲಿಕಾಪ್ಟರ್ ಶೋಧ ನಡೆಸಿ ಅಮಾನತುಗೊಂಡ ಐಎಎಸ್ ಅಧಿಕಾರಿ

Update: 2019-04-26 22:27 IST

ಹೊಸದಿಲ್ಲಿ,ಎ.26: ಪ್ರಧಾನಿ ಮೋದಿಯ ಹೆಲಿಕಾಪ್ಟರನ್ನು ಶೋಧ ನಡೆಸಿದ ಕಾರಣಕ್ಕೆ ಅಮಾನತುಗೊಂಡ ಐಎಎಸ್ ಅಧಿಕಾರಿ ಮುಹಮ್ಮದ್ ಮುಹ್ಸಿನ್, ಚುನಾವಣಾ ಆಯೋಗ ತನ್ನ ಹೇಳಿಕೆಗೂ ಅವಕಾಶ ನೀಡದೆ ತನ್ನ ವಿರುದ್ಧ ಉದ್ಧಟತನದ, ಅನಿರ್ಬಂಧಿತ ಮತ್ತು ದುರುದ್ಧೇಶಪೂರಿತ ಕ್ರಮ ತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

ನಾವು ಚುನಾವಣಾ ಆಯೋಗದ ಕಣ್ಣು ಮತ್ತು ಕಿವಿಗಳಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆದರೆ ಆಯೋಗ ಕೇವಲ ಜಿಲ್ಲಾಡಳಿತದ ಹೇಳಿಕೆಯನ್ನು ಮಾತ್ರ ಪಡೆದುಕೊಂಡಿದೆ. ನನ್ನ ಉದ್ದೇಶ ಮತ್ತು ಹೇಳಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಮುಹ್ಸಿನ್ ಶುಕ್ರವಾರ ‘ದಿ ಪ್ರಿಂಟ್‌’ಗೆ ತಿಳಿಸಿದ್ದಾರೆ. ಸದ್ಯ ಚುನಾವಣಾ ಆಯೋಗ ಮುಹ್ಸಿನ್ ಮೇಲೆ ವಿಧಿಸಿರುವ ಅಮಾನತು ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣ (ಸಿಎಟಿ) ತಡೆ ಹೇರಿದೆ.

ಒಡಿಶಾದ ಸಂಬಲ್ಪುರದಲ್ಲಿ ಎಪ್ರಿಲ್ 16ರಂದು ಚುನಾವಣಾ ಕರ್ತವ್ಯದಲ್ಲಿದ್ದ ಮುಹಮ್ಮದ್ ಮುಹ್ಸಿನ್ ಪ್ರಧಾನಿ ಮೋದಿಯ ಹೆಲಿಕಾಪ್ಟರನ್ನು ಶೋಧಿಸಿದ ಕಾರಣಕ್ಕೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಅಮಾನತು ವಿರುದ್ಧ ಸಿಎಟಿಗೆ ಬರೆದ ಪತ್ರದಲ್ಲಿ ಮುಹ್ಸಿನ್, ನನ್ನ ಅಮಾನತು ಆದೇಶದಲ್ಲಿ ಒಂದೇ ಒಂದು ಕಡೆಯೂ ನನ್ನನ್ನು ಯಾವ ವಿಧಿ ಅಥವಾ ಕಾನೂನಿನಡಿಯಲ್ಲಿ ಅಮಾನತುಗೊಳಿಸಲಾಗಿದೆ ಎಂಬುದನ್ನು ತಿಳಿಸಲಾಗಿಲ್ಲ. ನನಗೆ ಯಾವುದೇ ರಾಜಕೀಯ ಪಕ್ಷದಲ್ಲಿ ಗೆಳೆಯರೂ ಇಲ್ಲ ಶತ್ರುಗಳೂ ಇಲ್ಲ. ನಾನು ಕಾನೂನಿನ ಪ್ರಕಾರ ಕೆಲಸ ಮಾಡುತ್ತೇನೆ. ಹಾಗಾಗಿ ಕನಿಷ್ಟ ನಾನು ಯಾವ ಕಾನೂನನ್ನು ಉಲ್ಲಂಘಿಸಿದ್ದೇನೆ ಎನ್ನುವುದನ್ನಾದರೂ ತಿಳಿಸಬೇಕು ಎಂದು ಆಗ್ರಹಿಸಿದ್ದರು.

ಈ ಕುರಿತು ಎಪ್ರಿಲ್ 23ರಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರೂ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮುಹ್ಸಿನ್ ಆರೋಪಿಸಿದ್ದಾರೆ. ತನ್ನ ಅಮಾನತಿಗೆ ಕಾರಣವಾದ 32 ಪುಟಗಳ ವರದಿಯನ್ನು ಸಿದ್ಧಪಡಿಸಿದ್ದ ಚುನಾವಣಾ ಸಹಾಯಕ ಆಯುಕ್ತ ಧರ್ಮೇಂದ್ರ ಶರ್ಮಾ ಅವರು ನಾನು ಅಮಾನತುಗೊಂಡ ನಂತರವಷ್ಟೇ ನನ್ನ ಬಳಿ ಪ್ರತಿಕ್ರಿಯೆ ಕೇಳಿದ್ದಾರೆ ಎಂದು ಮುಹ್ಸಿನ್ ಆರೋಪಿಸಿದ್ದಾರೆ.

ಸದ್ಯ ಚುನಾವಣಾ ಆಯೋಗ ಮುಹ್ಸಿನ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿದ್ದರೂ ಅವರು ಚುನಾವಣಾ ಕರ್ತವ್ಯ ನಿರ್ವಹಿಸುವುದರ ಮೇಲೆ ನಿಷೇಧ ಹೇರಿದೆ ಮತ್ತು ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ಸರಕಾರಕ್ಕೆ ಸಲಹೆ ನೀಡಿದೆ.

ಸಿಎಟಿಗೆ ಸಲ್ಲಿಸಿದ ಅರ್ಜಿಯಲ್ಲಿ, ಒಂದು ವೇಳೆ ಐಎಎಸ್ ಅಧಿಕಾರಿ ಪ್ರಧಾನಿಯವರ ಹೆಲಿಕಾಪ್ಟರನ್ನು ದೂರದಿಂದ ಚಿತ್ರೀಕರಿಸಿದ್ದರೆ ಅವರ ಕ್ರಮವನ್ನು ಶ್ಲಾಘಿಸಬೇಕು. ಯಾಕೆಂದರೆ ಪ್ರಧಾನಿಯೂ ರಾಜಕಾರಣಿಯಾಗಿದ್ದು ಕಾನೂನಿಗಿಂತ ಮೇಲಲ್ಲ ಎಂದು ತಿಳಿಸಲಾಗಿದೆ.

ಕೇಂದ್ರದ ಬಿಜೆಪಿ ಸರಕಾರ ನಿಮ್ಮನ್ನು ಮೂಲೆಗುಂಪಾಗಿಸುವ ಭಯವಿದೆಯೇ ಎಂದು ಕೇಳಿದ ಪ್ರಶ್ನೆಗೆ, ಕಳೆದ 22 ವರ್ಷಗಳ ನನ್ನ ಸೇವೆಯಲ್ಲಿ ನಾನು ಈವರೆಗೂ ಯಾವುದೇ ಸರಕಾರದಿಂದ ಒಂದು ಶೋಕಾಸ್ ನೋಟಿಸ್ ಕೂಡಾ ಪಡೆದುಕೊಂಡಿಲ್ಲ. ನಾನು ಯಾವತ್ತೂ ಕಾನೂನು ಪ್ರಕಾರ ಕೆಲಸ ಮಾಡಿದವನು ಮತ್ತು ಮುಂದೆಯೂ ಹಾಗೆಯೇ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಎಸ್‌ಪಿಜಿ ಭದ್ರತೆ ಉಲ್ಲಂಘಿಸಿದ ಕಾರಣಕ್ಕೆ ಅಮಾನತು;

ಮುಹ್ಸಿನ್ ಅಮಾನತು ಆದೇಶಕ್ಕೆ ತಡೆ ವಿಧಿಸಿರುವ ಸಿಎಟಿ, ಎಸ್‌ಪಿಜಿ ಭದ್ರತೆ ಹೊಂದಿರುವವರಿಗೆ ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚಿನ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸುವುದು ಅಗತ್ಯವಾಗಿದ್ದರೂ ಅವರು ಎಲ್ಲದಕ್ಕೂ ಅರ್ಹರು ಎಂದರ್ಥವಲ್ಲ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News