×
Ad

ಆಲೂಗಡ್ಡೆ ಪ್ರಕರಣ: ನ್ಯಾಯಾಲಯದ ಹೊರಗೆ ಬಗೆಹರಿಸಲಿ ಪೆಪ್ಸಿಕೊ ಒಲವು

Update: 2019-04-26 22:39 IST

ಹೊಸದಿಲ್ಲಿ,ಎ.26: ತಾನು ಹಕ್ಕುಸ್ವಾಮ್ಯ ಹೊಂದಿರುವ ಆಲೂಗಡ್ಡೆಯನ್ನು ಬೆಳೆಸಿದ್ದಾರೆ ಎಂದು ಆರೋಪಿಸಿ ಗುಜರಾತ್‌ನ ಕೆಲವು ರೈತರ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಪೆಪ್ಸಿಕೊ ಸದ್ಯ ತನ್ನ ಪಟ್ಟನ್ನು ಸಡಿಲಗೊಳಿಸಿದ್ದು ರೈತರು ತನ್ನ ಕೆಲವೊಂದು ಷರತ್ತುಗಳಿಗೆ ಒಪ್ಪುವುದಾದರೆ ನ್ಯಾಯಾಲಯದ ಹೊರಗೆ ಈ ಪ್ರಕರಣವನ್ನು ಬಗೆಹರಿಸಿಕೊಳ್ಳಲು ಸಿದ್ಧ ಎಂದು ತಿಳಿಸಿದೆ.

ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿದ ಪೆಪ್ಸಿಕೊ ಪರ ವಕೀಲ, ಮೊದಲಿಗೆ ರೈತರು ನಮ್ಮ ಜೊತೆ ಒಪ್ಪಂದಕ್ಕೆ ಸಹಿ ಹಾಕಬೇಕು. ಈ ಒಪ್ಪಂದದಂತೆ ಅವರು ನಮ್ಮಿಂದ ಬೀಜವನ್ನು ಖರೀದಿಸಿ ತಮ್ಮ ಉತ್ಪಾದನೆಯನ್ನು ನಮಗೆ ಮಾರಬೇಕಾಗುತ್ತದೆ. ಅಥವಾ, ಭವಿಷ್ಯದಲ್ಲಿ ನಮ್ಮ ಅನುಮತಿಯಿಲ್ಲದೆ ಅವರು ನಮ್ಮ ನೋಂದಣಿ ಹೊಂದಿರುವ ಬೀಜಗಳನ್ನು ಬಳಸುವುದಿಲ್ಲ ಎನ್ನುವುದನ್ನು ಲಿಖಿತವಾಗಿ ನೀಡಬೇಕಾಗುತ್ತದೆ.

ಇದಕ್ಕೆ ಉತ್ತರಿಸಿರುವ ರೈತರ ಪರ ವಕೀಲ ಆನಂದ ಯಾಗ್ನಿಕ್, ಸದ್ಯ ಪ್ರಸ್ತಾವ ರೈತರ ಮುಂದಿದ್ದು ಈ ಬಗ್ಗೆ ರೈತರು ಯೋಚಿಸಿ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವರು ಎಂದು ತಿಳಿಸಿದ್ದಾರೆ.

ಆದರೆ ನ್ಯಾಯಾಲಯದ ಹೊರಗೆ ಈ ಸಮಸ್ಯೆಯನ್ನು ಬಗೆಹರಿಸಲು ಒಲ್ಲದ ರೈತರು ಕಾನೂನು ಸಮರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಪೆಪ್ಸಿಕೊ ನಮ್ಮ ಮೇಲೆ ದೌರ್ಜನ್ಯವೆಸಗಿದೆ. ಬಹುರಾಷ್ಟ್ರೀಯ ಕಂಪೆನಿಯ ಇಂಥ ಒತ್ತಡದ ತಂತ್ರದಿಂದ ನಾವು ಹೆದರುವುದಿಲ್ಲ. ನಾವು ಕಾನೂನು ಸಮರಕ್ಕೆ ಸಿದ್ಧ ಎಂದು ರೈತರು ತಿಳಿಸಿರುವುದಾಗಿ ಹಿಂದು ಬಿಸಿನೆಸ್ ಲೈನ್ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News