ಅಭಿವೃದ್ಧಿ ಕಾರ್ಯ ನಡೆಸದ ಸರಕಾರದ ವಿರುದ್ಧ ಆಕ್ರೋಶ: ಮತದಾನ ಬಹಿಷ್ಕರಿಸಿದ ರಾಜಸ್ತಾನದ ಗ್ರಾಮಸ್ಥರು

Update: 2019-04-26 17:27 GMT

ಜೈಪುರ, ಎ.26: ಅಭಿವೃದ್ಧಿ ಕಾರ್ಯದ ಹೆಸರಲ್ಲಿ ಸರಕಾರ ತಮಗೆ ವಂಚಿಸಿದೆ ಮತ್ತು ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜಸ್ತಾನದ ಪಾಲಿ ಜಿಲ್ಲೆಯ ಧಿಂಗಾನ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿರುವುದಾಗಿ ವರದಿಯಾಗಿದೆ. ಪ್ರಮುಖ ಸಮಸ್ಯೆಗಳಾದ ನೀರಿನ ಕೊರತೆ, ರಸ್ತೆಯ ಅವ್ಯವಸ್ಥೆ, ಬಾಲಕಿಯರಿಗೆ ಶಾಲೆಯ ಸೌಕರ್ಯದ ಕೊರತೆಯ ಜೊತೆಗೆ ಇತರ ಹಲವು ಸಮಸ್ಯೆಗಳ ಬಗ್ಗೆ ಸರಕಾರ ನಿರ್ಲಕ್ಷ್ಯದ ಧೋರಣೆ ತಳೆದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆಯನ್ನು ಬಹಿಷ್ಕರಿಸುವುದು ನಮಗಿರುವ ಅಂತಿಮ ಆಯ್ಕೆಯಾಗಿದೆ. ನೀರಿನ ಸಮಸ್ಯೆ, ರಸ್ತೆಯ ಸಮಸ್ಯೆ, ಬಾಲಕಿಯರಿಗೆ ಶಾಲೆಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ, ಸರಕಾರವನ್ನು ಆಯ್ಕೆ ಮಾಡುವ ಮತದಾನದಲ್ಲಿ ಪಾಲ್ಗೊಂಡು ಏನು ಪ್ರಯೋಜನ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಮಳೆಯ ಕೊರತೆಯಿಂದ ಊರಿನಲ್ಲಿ ಬಾವಿ, ಹಳ್ಳ, ಕೆರೆಗಳು ಬರಿದಾಗಿವೆ. ಜಾನುವಾರುಗಳಿಗೂ ಕುಡಿಯುವ ನೀರಿಲ್ಲ ಎಂಬ ಪರಿಸ್ಥಿತಿಯಿದೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವುದು ಸಮಸ್ಯೆಗೆ ಪರಿಹಾರವಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕೆಂದು ಕಳೆದ 3 ವರ್ಷದಿಂದಲೂ ನಾವು ಆಗ್ರಹಿಸುತ್ತಿದ್ದೇವೆ ಎಂದು ಸ್ಥಳೀಯರಾದ ಬಲದೇವ್ ಚೌಧರಿ ಹೇಳಿದ್ದಾರೆ. ಎರಡು ತಿಂಗಳಿಂದ ಸ್ಥಳೀಯಾಡಳಿತ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸುತ್ತಿದೆ. ಜನರಿಗಷ್ಟೇ ಅಲ್ಲ ಜಾನುವಾರುಗಳ ಮೇಲೂ ನೀರಿನ ಸಮಸ್ಯೆ ಪರಿಣಾಮ ಬೀರಿದೆ. ಅಧಿಕಾರಿಗಳಿಗೆ ನಿರಂತರ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ಈಗ ಮತದಾನ ಬಹಿಷ್ಕಾರ ನಮಗಿರುವ ಏಕೈಕ ದಾರಿಯಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸೊಹಾನ್‌ಲಾಲ್ ಪನ್ವಾರ್ ಹೇಳಿದ್ದಾರೆ.

2008ರಲ್ಲಿ ಇಲ್ಲಿ ಮಾಧ್ಯಮಿಕ ಶಾಲೆಗೆ ಶಿಲಾನ್ಯಾಸ ನಡೆದಿದೆ. ಆದರೆ ಬಳಿಕ ಯಾವುದೇ ಪ್ರಗತಿಯಾಗಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News