"ಸಿಕ್ಸರ್ ಬಾರಿಸಿ ಮೋದಿ ಸರ್ಕಾರ ಹೊರಗಟ್ಟಿ"

Update: 2019-04-27 04:09 GMT

ಮುಂಬೈ, ಎ.27: ನರೇಂದ್ರ ಮೋದಿ ಸರ್ಕಾರ ಬೆರಳೆಣಿಕೆಯ ಶ್ರೀಮಂತರ ಪರವಾಗಿ ಮಾತ್ರ ಕೆಲಸ ಮಾಡುತ್ತಿದ್ದು, ಈ ಚುನಾವಣೆಯಲ್ಲಿ ಮತದಾರರು, ಸಿಕ್ಸರ್ ಬಾರಿಸುವ ಮೂಲಕ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಸಿಧು ಕರೆ ನೀಡಿದ್ದಾರೆ.

ದಕ್ಷಿಣ ಮುಂಬೈನಲ್ಲಿ ಪಕ್ಷದ ಅಭ್ಯರ್ಥಿ ಮಿಲಿಂದ್ ದೇವೂರ ಪರ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, "ದೇಶದ ಜಿಡಿಪಿ ಪ್ರಗತಿ ಚೀನಾಕ್ಕಿಂತ ಅಧಿಕ ಇದ್ದರೂ, ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ" ಎಂದು ಆಪಾದಿಸಿದರು.

"ಮೋದಿಜೀ ನೀವು ಕೇವಲ ಶ್ರೀಮಂತರ ಪ್ರಧಾನಿ. ನೀವು ಬಡ ನಾಗರಿಕರ ಪ್ರಧಾನಿಯಲ್ಲ; ದೇಶದ ಬಡವರು ಮತ್ತು ರೈತರ ಜತೆ ನೀವೆಂದೂ ಕಾಣಿಸಿಕೊಂಡಿಲ್ಲ. ಏಕೆಂದರೆ ನೀವು ಅಂಬಾನಿ ಮತ್ತು ಅದಾನಿಯಂಥವರ ಚೌಕಿದಾರಿ ಮಾಡುವಲ್ಲೇ ನಿರತರಾಗಿದ್ದಿರಿ" ಎಂದು ಸಿಧು ಕುಟುಕಿದರು.

"ನೀವು ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದಿರಿ. ಆದರೆ ಐದು ವರ್ಷಗಳಲ್ಲಿ ಕೇವಲ 8 ಲಕ್ಷ ಉದ್ಯೋಗ ಸೃಷ್ಟಿಸಿದ್ದೀರಿ. ಚೀನಾವನ್ನು ನೋಡಿ; ಅಲ್ಲಿನ ಜಿಡಿಪಿ ಪ್ರಗತಿದರ 6.2 ಇದ್ದು, ಐದು ವರ್ಷಗಳಲ್ಲಿ 70 ಲಕ್ಷ ಉದ್ಯೋಗ ಸೃಷ್ಟಿಸಿದೆ. ನಮ್ಮ ಜಿಡಿಪಿ ಪ್ರಗತಿದರ ಶೇಕಡ 8 ಇದ್ದರೂ, ನೀವು ಸೃಷ್ಟಿಸಿರುವ ಉದ್ಯೋಗ ಎಂಟು ಲಕ್ಷ" ಎಂದು ಅಂಕಿ ಅಂಶ ಸಹಿತ ವಿವರಿಸಿದರು.

ಮತದಾರರು ಸಿಕ್ಸರ್ ಬಾರಿಸುವ ಮೂಲಕ ಈ ಸರ್ಕಾರವನ್ನು ರಾಜ್ಯದಿಂದಾಚೆ ಕಳುಹಿಸಬೇಕು ಎಂದು ಸಿಧು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ದೇಶಕ್ಕೆ ಐದು ಗಾಂಧಿಗಳನ್ನು ನೀಡಿದ್ದರೆ, ಬಿಜೆಪಿ ಸರ್ಕಾರ ನೀರವ್, ಲಲಿತ್ ಮತ್ತು ನರೇಂದ್ರ ಹೀಗೆ ಮೂವರು ಮೋದಿಗಳನ್ನು ನೀಡಿದೆ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News