ಲೈಂಗಿಕ ಕಿರುಕುಳ ಆರೋಪಗಳ ತನಿಖೆ ಮುಗಿದ ಬಳಿಕವೇ ವಿಚಾರಣೆ ಪ್ರಾರಂಭ: ನ್ಯಾ(ನಿ).ಪಟ್ನಾಯಕ್

Update: 2019-04-27 14:12 GMT

ಹೊಸದಿಲ್ಲಿ,ಎ.27: ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ರಂಜನ್ ಗೊಗೊಯಿ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮಾಜಿ ಮಹಿಳಾ ಉದ್ಯೋಗಿಯೋರ್ವರು ಮಾಡಿರುವ ಲೈಂಗಿಕ ಕಿರುಕುಳ ಆರೋಪಗಳ ಕುರಿತು ಆಂತರಿಕ ಸಮಿತಿಯು ವಿಚಾರಣಾ ಪೂರ್ಣಗೊಳಿಸಿದ ಬಳಿಕವೇ ತಾನು ‘ಷಡ್ಯಂತ್ರ’ ಆರೋಪದ ಕುರಿತು ತನ್ನ ವಿಚಾರಣೆಯನ್ನು ಆರಂಭಿಸುವುದಾಗಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎ.ಕೆ.ಪಟ್ನಾಯಕ್ ಅವರು ಹೇಳಿದ್ದಾರೆ.

ಸಿಜೆಐ ಅವರನ್ನು ಲೈಂಗಿಕ ಕಿರುಕುಳ ಆರೋಪಗಳಲ್ಲಿ ಸಿಲುಕಿಸಲು ಷಡ್ಯಂತ್ರ ನಡೆದಿತ್ತು ಎಂಬ ವಕೀಲ ಉತ್ಸವ ಸಿಂಗ್ ಬೈನ್ಸ್ ಅವರ ಹೇಳಿಕೆಯ ಕುರಿತು ತನಿಖೆಗಾಗಿ ರಚಿಸಲಾಗಿರುವ ಸಮಿತಿಯ ನೇತೃತ್ವವನ್ನು ಅವರು ವಹಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಲು ಯಾವುದೇ ಗಡುವನ್ನು ವಿಧಿಸಲಾಗಿಲ್ಲ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ನ್ಯಾ(ನಿ).ಪಟ್ನಾಯಕ್ ಅವರು,ಸಿಜೆಐ ವಿರುದ್ಧದ ದೂರುಗಳ ಕುರಿತು ಆಂತರಿಕ ಸಮಿತಿಯ ವಿಚಾರಣೆ ಮುಗಿದ ಬಳಿಕ ‘ಷಡ್ಯಂತ್ರ’ ಕುರಿತು ತನ್ನ ವಿಚಾರಣೆ ಆರಂಭಗೊಳ್ಳಲಿದೆ ಎಂದರು.

ಮು.ನ್ಯಾ.ಗೊಗೊಯಿ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸಲು ತನಗೆ 1.5 ಕೋ.ರೂ.ಗಳ ಆಮಿಷವನ್ನೊಡ್ಡಲಾಗಿತ್ತು ಎಂದು ಹೇಳಿದ್ದ ಬೈನ್ಸ್,ಗೊಗೊಯಿ ವಿರುದ್ಧ ಷಡ್ಯಂತ್ರ ನಡದಿದೆ ಎಂಬ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡು ಸರ್ವೋಚ್ಚ ನ್ಯಾಯಾಲಯಕ್ಕೆ ಎರಡು ಅಫಿದಾವಿತಗಳನ್ನು ಸಲ್ಲಿಸಿದ ಬಳಿಕ ನ್ಯಾಯಾಲಯವು ಈ ಬಗ್ಗೆ ವಿಚಾರಣೆಗಾಗಿ ಗುರವಾರ ನ್ಯಾ(ನಿ).ಪಟ್ನಾಯಕ್ ನೇತೃತ್ವದ ಸಮಿತಿಯನ್ನು ರಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News