ಕುಂಭಮೇಳದ ಬಳಿಕ ಪ್ರಯಾಗ್ ರಾಜ್‌ ನಲ್ಲಿ ಭಾರೀ ತ್ಯಾಜ್ಯ ಸಂಗ್ರಹ: ಸೋಂಕುರೋಗದ ಭೀತಿ

Update: 2019-04-27 17:27 GMT

ಹೊಸದಿಲ್ಲಿ, ಎ.28: ಕಳೆದ ತಿಂಗಳು ಸಮಾರೋಪಗೊಂಡ 53 ದಿನಗಳ ಕುಂಭಮೇಳದ ಬಳಿಕ, ಪ್ರಯಾಗ್‌ ರಾಜ್ ‌ನಲ್ಲಿ ಪರಿಸರ ಮಾಲಿನ್ಯ ಕಳವಳಕಾರಿಯಾಗಿದೆ ಹಾಗೂ ಸೋಂಕುರೋಗಗಳು ಹರಡುವುದನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆಯೆಂದು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ ಜಿಟಿ)ವು ತಿಳಿಸಿದೆ.

ಪ್ರಯಾಗ್ ರಾಜ್ ನ ಬಸ್ವಾರ್ ಘನ ತ್ಯಾಜ್ಯ ನಿರ್ವಹಣಾ ಸ್ಥಾವರದಲ್ಲಿ 60 ಸಾವಿರ ಮೆಟ್ರಿಕ್ ಟನ್ ಘನತ್ಯಾಜ್ಯ ಸಂಗ್ರಹವಾಗಿದ್ದು, ಅದು ವಿಲೇವಾರಿಯಾಗದೆ ಉಳಿದಿದೆ. ಈ ಪೈಕಿ 18 ಸಾವಿರ ಮೆಟ್ರಿಕ್ ಟನ್ ಘನತ್ಯಾಜ್ಯವು ಕುಂಭಮೇಳದ ಸಂದರ್ಭ ಸೃಷ್ಟಿಯಾಗಿದ್ದುದಾಗಿದೆ ಎಂದು ನ್ಯಾಯಮೂರ್ತಿ ಅರುಣ್ ಟಂಡನ್ ನೇತೃತ್ವದ ಸಮಿತಿಯು ಎನ್‌ ಜಿಟಿಗೆ ಸಲ್ಲಿಸಿದ ವರದಿ ಹೇಳಿದೆ. ಈ ಸ್ಥಾವರವು 2018ರಿಂದೀಚೆಗೆ ಕಾರ್ಯನಿರ್ವಹಿಸುತ್ತಿಲ್ಲವೆಂದು ಅದು ತಿಳಿಸಿದೆ.

ಕುಂಭಮೇಳದ ಬಳಿಕ ಪ್ರಯಾಗ್ ರಾಜ್ ನಲ್ಲಿ ಸಂಗ್ರಹವಾಗಿರುವ ಘನತ್ಯಾಜ್ಯವನ್ನು ವಿಲೇವಾರಿ ಮಾಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಎನ್‌ ಜಿಟಿಯು ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. ಕುಂಭಮೇಳದ ಸಂದರ್ಭ ಗಂಗಾನದಿಯ ತಟದ ಸಮೀಪವೇ ಭಾರೀ ಸಂಖ್ಯೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿತ್ತೆಂದು ವರದಿ ತಿಳಿಸಿದೆ. ತ್ರಿವೇಣಿ ಸಂಗಮದ ಬಳಿ ಒಳಚರಂಡಿ ನೀರಿನ ನಿರ್ವಹಣೆ, ಚರಂಡಿಗಳನ್ನು ಸುವ್ಯವಸ್ಥಿತಗೊಳಿಸುವುದು ಹಾಗೂ ಘನತ್ಯಾಜ್ಯ ಸಂಸ್ಕರಣೆ ಘಟಕದ ನವೀಕರಣ ಕಾಮಗಾರಿಯ ಅಗತ್ಯವಿದೆಯೆಂದು ವರದಿ ಹೇಳಿದೆ.

ರಾಜಾಪುರ್ ಒಳಚರಂಡಿ ನಿರ್ವಹಣಾ ಸ್ಥಾವರಕ್ಕೆ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದುಬಂದಿದೆ. ಆ ಪೈಕಿ ಶೇಕಡ 50ರಷ್ಟನ್ನು ಮಾತ್ರವೇ ರಾಜಾಪುರ ಒಳಚರಂಡಿ ಸಂಸ್ಕರಿಸಲಾಗಿದ್ದು, ಉಳಿದ 50 ಶೇಕಡ ಚರಂಡಿ ನೀರು ಸಂಸ್ಕರಿಸಲ್ಪಡದೆ ಗಂಗಾನದಿಯನ್ನು ಸೇರಲು ಬಿಡಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News