ತನ್ನ ತಂದೆಯ ಕುರಿತು ಪ್ರಜ್ಞಾ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕರ್ಕರೆ ಪುತ್ರಿ ಹೇಳಿದ್ದೇನು?

Update: 2019-04-27 17:48 GMT

ಮುಂಬೈ: ಹುತಾತ್ಮ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಕುರಿತ ಬಿಜೆಪಿ ಅಭ್ಯರ್ಥಿ ಹಾಗೂ ಮಾಲೆಂಗಾವ್ ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್ ನೀಡಿದ ವಿವಾದಾತ್ಮಕ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ಬಗ್ಗೆ ಕರ್ಕರೆ ಪುತ್ರಿ ಮಾತನಾಡಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಕರ್ಕರೆಯ ಪುತ್ರಿ ಜೂಹಿ ಕರ್ಕರೆ ಹಿಂದಿ ಪತ್ರಿಕೆ ‘ದೈನಿಕ್ ಭಾಸ್ಕರ್’ ಜೊತೆ ಮಾತನಾಡಿದ್ದು, ಕರ್ಕರೆ ಕುರಿತು ಕೀಳುಮಟ್ಟದ ಹೇಳಿಕೆ ನೀಡಿರುವುದನ್ನು ತಾನು ಮತದಾರರ ವಿವೇಚನೆಗೆ ಬಿಟ್ಟಿದ್ದೇನೆ. ಮತದಾರರು ಬಹಳ ಜಾಣರು, ಅವರೇ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಹುತಾತ್ಮರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುವವರ ಯಾವುದೇ ತಂತ್ರ ಮತದಾರರ ಮುಂದೆ ಫಲಿಸದು ಎಂದು ಜೂಹಿ ಕರ್ಕರೆ ಹೇಳಿದ್ದಾರೆ.

ನನ್ನ ತಂದೆಯ ಸಾವಿನ ಬಗ್ಗೆ ಕೆಲವು ರಾಜಕಾರಣಿಗಳು ನೀಚ ಹೇಳಿಕೆಗಳನ್ನು ಚುನಾವಣಾ ಲಾಭಕ್ಕಾಗಿ ನೀಡುತ್ತಿದ್ದಾರೆ. ಇಂತಹ ನೇತಾಗಳಿಗೆ ನಾನು ಏನೂ ಹೇಳಬಯಸುವುದಿಲ್ಲ, ಹೇಳಿದರೆ ಅವರಿಗೆ ಇದು ಮನವರಿಕೆಯೂ ಆಗದು.ಇನ್ನು ಅವರಿಗೆ ಪ್ರತಿಕ್ರಿಯಿಸುವ ಮೂಲಕ ಮಹತ್ವ ನೀಡಲು ನಾನು ಬಯಸುವುದಿಲ್ಲ ಎಂದು ಜೂಹಿ ಪ್ರತಿಕ್ರಿಯಿಸಿದ್ದಾರೆ.

ನನ್ನ ತಂದೆಯ ಬಗ್ಗೆ ಪ್ರಜ್ಞಾಸಿಂಗ್ ನಿಡಿದ್ದ ಹೇಳಿಕೆಯನ್ನು ಕೇಳಿ ನನಗೆ ನನ್ನ ತಾಯಿ ಬರೆದಿದ್ದ ಕವನ ನೆನಪಾಯಿತು. ನನ್ನ ಪತಿ ಹುತಾತ್ಮರಾದ ಬಗ್ಗೆ ನನಗೆ ದುಃಖಯಿದೆ ಆದರೆ ಆ ಕುರಿತು ವಿಷಾದವಿಲ್ಲ. ಅದರ ಬಗ್ಗೆ ಕೆಲವು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಏಳುತ್ತಿವೆ. ಆದರೆ ಅವುಗಳ ಉತ್ತರ ಸಿಗುತ್ತಿಲ್ಲ ಎಂದು ತಾಯಿ ಕವಿತೆಯಲ್ಲಿ ಬರೆದಿದ್ದರು. ನನ್ನ ತಂದೆ ನಿಧನರಾದಾಗ ಅವರಿಗೆ ಹೀರೋಗಿರಿಯ ಚಪಲವಿತ್ತು ಎಂದು ಹೇಳಿದವರೂ ಇದ್ದರು. ಆದರೆ ಅವರ ದೇಶಭಕ್ತಿಗೆ ಅವರು ಹುತಾತ್ಮರಾಗಿರುವುದೇ ಬಹುದೊಡ್ಡ ಸಾಕ್ಷಿಯಾಗಿದೆ. ಈಗ ಈ ದೇಶಕ್ಕಾಗಿ ಜೀವ ಕೊಟ್ಟವರ ಬಗ್ಗೆ ಇವರು(ಪ್ರಜ್ಞಾ ಸಿಂಗ್) ಮಾತನಾಡುತ್ತಿದ್ದಾರೆ.

ಸಾಪ್ಟ್ ವೇರ್ ಇಂಜಿನಿಯರ್ ಆಗಿರುವ ಜೂಹಿ ಕರ್ಕರೆ ಅಮೆರಿಕಾದ ಬಾಸ್ಟನ್ ನಲ್ಲಿ ತಮ್ಮ ಪತಿ ಹಾಗು ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಾರೆ. ಅವರ ಹಿರಿಯ ಸೋದರ ಹಾಗೂ ಸೋದರಿ ತಂದೆ ಹಾಗು ತಾಯಿಯ ನಿಧನದ ಬಳಿಕ ಸಾರ್ವಜನಿಕರಿಂದ ಅಂತರ ಕಾಯ್ದುಕೊಂಡು ಬದುಕುತ್ತಿದ್ದಾರೆ.

ತಮ್ಮ ತಂದೆಯ ಕೊಲೆಯಾದ ಬಗ್ಗೆ ಇಂದಿಗೂ ಕೇಳಿ ಬರುತ್ತಿರುವ ಪ್ರಶ್ನೆಗಳ ಕುರಿತು ಮಾತನಾಡಿರುವ ಜೂಹಿ, ನನ್ನ ತಂದೆ ಹಾಗು ಅಶೋಕ್ ಕಾಮ್ಟೆ( ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ನಿಧನರಾದ ಇನ್ನೊಬ್ಬ ಐಪಿಎಸ್ ಅಧಿಕಾರಿ) ಅವರ ಕೊನೆಯ ಫೋನ್ ಕಾಲ್ ಗಳ ವಿವರಗಳು ನನ್ನ ಬಳಿ ಹಾಗು ಕಾಮ್ಟೆ ಅವರ ಪತ್ನಿ ವಿನೀತ ಬಳಿ ಇವೆ. ಕಾಮಾ ಆಸ್ಪತ್ರೆಯ ಮೇಲೆ ಮುತ್ತಿಗೆ ಹಾಕಲು ಸೇನೆಯನ್ನು ಕಳಿಸಬೇಕು ಎಂದು ಕಂಟ್ರೋಲ್ ರೂಮ್ ಗೆ ಹೇಳಿದ್ದರು. ಕಂಟ್ರೋಲ್ ರೂಂನಲ್ಲಿ ನಗರದ ಹೆಚ್ಚುವರಿ ಪೊಲೀಸ್ ಕಮಿಷನರ್ ಇರಬೇಕಾಗಿತ್ತು. ಆದರೆ ಅವರು ಇರಲಿಲ್ಲ. ಈ ಮೂವರು ಅಧಿಕಾರಿಗಳು(ಕರ್ಕರೆ,ಕಾಮ್ಟೆ,ಸಾಲಸ್ಕರ್) ದಾಳಿ ಯೋಜನೆ ಪೂರ್ಣಗೊಳಿಸುವಲ್ಲಿ ನಿಪುಣರಾಗಿದ್ದರು. ಆದರೂ ಹೀಗೆಲ್ಲಾ ಆಗಿ ಹೋಯಿತು. ಇವತ್ತಿಗೂ ಈ ಪ್ರಶ್ನೆ ನನ್ನನ್ನು ಕಾಡುತ್ತಲೇ ಇವೆ ಎಂದು ಜೂಹಿ ಹೇಳಿದ್ದಾರೆ.

ಕೃಪೆ: bhaskar.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News