ರಾಮಲ್‌ಕಟ್ಟೆ ಹೆಲಿಫ್ಟಿಂಗ್ ಪಂಪ್‌ಹೌಸ್ ನೀರು ಸಂಸ್ಕರಣಾ ಘಟಕವಾಗಿ ಮೇಲ್ದರ್ಜೆಗೆ!

Update: 2019-04-28 08:03 GMT
ರಾಮಲ್‌ಕಟ್ಟೆಯಲ್ಲಿರುವ ತುಂಬೆ ಹೈಲಿಫ್ಟಿಂಗ್ ಪಂಪ್‌ಹೌಸ್.

►ಮಂಗಳೂರು ಮಹಾನಗರ ಪಾಲಿಕೆ ಕ್ಯುಮಿಪ್ ಯೋಜನೆಯಡಿ ಕಾಮಗಾರಿ

►ಮಂಗಳೂರು ನಗರ ಸಹಿತ ತಾಲೂಕಿನ 4 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಕಚ್ಛಾ ನೀರು

►ಕುಡಿಯುತ್ತಿದ್ದ ಅವಳಿ ತಾಲೂಕಿನ ಗ್ರಾಮಸ್ಥರಿಗಿನ್ನು ಶುದ್ಧ ನೀರು

ಮುಖ್ಯಾಂಶಗಳು

►ಎರಡು ಎಕರೆ ಪ್ರದೇಶದಲ್ಲಿ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್

►35.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕಾರ್ಯಗತ

►ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ

►ಒಟ್ಟು ಇಪ್ಪತ್ತು ಎಂಎಲ್‌ಡಿ ನೀರು ಸಂಸ್ಕರಣೆ

ಬಂಟ್ವಾಳ, ಎ. 27: ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ಆಯ್ದ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದ್ದ ರಾಮಲ್‌ಕಟ್ಟೆಯಲ್ಲಿರುವ ತುಂಬೆ ಹೈಲಿಫ್ಟಿಂಗ್ ಪಂಪ್‌ಹೌಸ್ ಇನ್ನು ಮುಂದೆ ನದಿ ನೀರಿನ ಸಂಸ್ಕರಣಾ ಘಟಕವಾಗಿ ಮೇಲ್ದರ್ಜೆಗೆರಲಿದೆ.

ತುಂಬೆ ಡ್ಯಾಂನ ನೀರನ್ನು ಇಲ್ಲಿನ ಸಂಸ್ಕರಣಾ ಘಟಕ (ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್)ದ ಮೂಲಕ ಪೂರೈಕೆ ಮಾಡುವ ಯೋಜನೆ ರೂಪಿಸಲಾಗಿದ್ದು, ಇದರ ಕಾಮಗಾರಿಯೂ ಈಗಾಗಲೇ ಚುರುಕುಗೊಂಡಿದೆ. ಈ ಮೊದಲು ನದಿಯ ಕಚ್ಛಾ ನೀರನ್ನು ಕುಡಿಯುತ್ತಿದ್ದ ಅವಳಿ ತಾಲೂಕಿನ ಗ್ರಾಮಸ್ಥರಿಗೆ ಈ ಯೋಜನೆಯಿಂದ ಶುದ್ಧ ನೀರು ಸಿಗುವಂತಾಗಲಿದೆ.

ತುಂಬೆಯ ರಾಮಲ್‌ಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ಈ ಸಂಸ್ಕಾರಣಾ ಘಟಕವು 2ನೇ ಘಟಕವಾಗಿದ್ದು, ಇದರಿಂದಾಗಿ ಇನ್ನು ಮುಂದೆ ಮಂಗಳೂರು ನಗರ, ಅಡ್ಯಾರ್, ಮೇರಮಜಲು, ಪುದು ಹಾಗೂ ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಶುದ್ಧ ಕುಡಿಯುವ ನೀರು ಪಡೆಯಬಹುದಾಗಿದೆ. ಏನಿದು ಕ್ಯುಮಿಪ್ ಯೋಜನೆ?: ಮಂಗಳೂರು ಮಹಾನಗರ ಪಾಲಿಕೆ ಕ್ಯುಮಿಪ್ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 35.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ. ತುಂಬೆ ಯಲ್ಲಿ ವೆಂಟೆಡ್ ಡ್ಯಾಂಗಳು ನಿರ್ಮಾಣಗೊಳ್ಳುವ ಮೊದಲು ರಾಮಲ್‌ಕಟ್ಟೆಯ ಪಂಪ್‌ಹೌಸ್‌ನಿಂದ ಮಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಡ್ಯಾಂ ನಿರ್ಮಾಣಗೊಂಡ ಬಳಿಕ ನದಿಯಿಂದ ಪಂಪ್‌ಮಾಡಿದ ನೀರನ್ನು ರೇಚಕ ಸ್ಥಾವರದಲ್ಲಿ ಶುದ್ಧೀಕರಣಗೊಳಿಸಿ ಮಂಗಳೂರಿಗೆ ಪೂರೈಕೆಯಾಗಲಾರಂಭಿತು. ಆದರೆ, ಮಂಗಳೂರಿನ ಹೊರವಲಯದಲ್ಲಿರುವ ಗ್ರಾಪಂಗಳಾದ ಅಡ್ಯಾರ್, ಪುದು ಹಾಗೂ ತುಂಬೆ ಗ್ರಾಪಂಗಳಿಗೆ ಈವರೆಗೂ ಇದೇ ಪಂಪ್ ಹೌಸ್ ಮೂಲಕ ನೇತ್ರಾವತಿ ನದಿಯಿಂದ ಮೇಲೆತ್ತಲ್ಪಟ್ಟ ಶುದ್ಧೀಕರಿಸದ ಕಚ್ಛಾ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಹೆಚ್ಚುವರಿ ನೀರು ಮಂಗಳೂರಿಗೆ: ರಾಮಲ್‌ಕಟ್ಟೆಯ ಪಂಪ್‌ಹೌಸ್‌ನ 2 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಾಣವಾಗಲಿದೆ. ಈ ಫ್ಲಾಂಟ್‌ನಿಂದ 20 ಎಂಎಲ್‌ಡಿ ನೀರು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಸಂಸ್ಕರಣಾ ಮಾಡಿದ 20 ಎಂಎಲ್‌ಡಿ ನೀರಲ್ಲಿ, 10 ಎಂಎಲ್‌ಡಿ ನೀರು ಗ್ರಾಮೀಣ ಭಾಗಕ್ಕೆ ಪೂರೈಕೆಯಾದರೆ ಉಳಿದ 10 ಎಂಎಲ್‌ಡಿ ನೀರು ಮಂಗಳೂರು ಮಹಾನಗರ ಪಾಲಿಕೆಯ ಜನರಿಗೆ ಲಭ್ಯವಾಗಲಿದೆ. ಈಗ ಮಂಗಳೂರಿಗೆ ನೀರು ಸರಬರಾಜಾಗುವ ತುಂಬೆ ಶುದ್ಧೀಕರಣ ಘಟಕದ ಕಾಲು ಭಾಗದಷ್ಟು ದೊಡ್ಡ ಶುದ್ದೀಕರಣ ಘಟಕ ಇದೀಗ ರಾಮಲ್‌ಕಟ್ಟೆಯಲ್ಲಿ ನಿರ್ಮಾಣಗೊಳ್ಳಲಿದೆ. 24 ತಿಂಗಳುಗಳಲ್ಲಿ ಕಾಮಗಾರಿ ಪೂರ್ಣ?: ಮಹರಾಷ್ಟ್ರ ಥಾಣೆಯ ಎಸ್‌ಎಂಸಿ ಇನ್ಪ್ರಾಸ್ಟ್ರಕ್ಚರ್ ಪ್ರೈ.ಲಿ. ಕಂಪೆನಿ ನಿರ್ಮಾಣ ಗುತ್ತಿಗೆಯನ್ನು ವಹಿಸಿಕೊಂಡಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, 24 ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಿರುವ ಹಳೆಯ ನೀರು ಸಂಗ್ರಹಣ ತೊಟ್ಟಿಯಲ್ಲಿ ನೀರು ಹಾಗೂ ಹೂಳು ತೆಗೆದ ಬಳಿಕ ಮಣ್ಣು ತುಂಬಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯಲಿದೆ. ಇಲ್ಲಿ ಸುಮಾರು 4 ಎಕರೆಯಷ್ಟು ವಿಸ್ತೀರ್ಣದ ಜಮೀನಿದ್ದು, ಸುಮಾರು 2 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಡ್ಯಾರ್, ಮೇರಮಜಲು, ಪುದು, ತುಂಬೆ ಹಾಗೂ ಮಂಗಳೂರು ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ತುಂಬೆ ರಾಮಲ್‌ಕಟ್ಟೆಯ ಪಂಪ್‌ಹೌಸ್‌ನಲ್ಲಿ ಹೊಸ ನೀರು ಸಂಸ್ಕರಣಾ ಘಟಕ ನಿರ್ಮಾಣವಾಗುತ್ತಿದೆ. ಈಗಾಗಲೇ ಗುತ್ತಿಗೆ ಸಂಸ್ಥೆಗೆ ಕೆಲಸ ಆರಂಭಿಸಿದ್ದು, ಮುಂದಿನ ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

 ಅಮೃತ್‌ಕುಮಾರ್ ಸೋಲಾಂಕಿ,

ಕಾರ್ಯನಿರ್ವಾಹಕ ಇಂಜಿನಿಯರ್, ಕ್ಯುಮಿಪ್

Writer - ಅಬ್ದುಲ್ ರಹಿಮಾನ್ ತಲಪಾಡಿ,

contributor

Editor - ಅಬ್ದುಲ್ ರಹಿಮಾನ್ ತಲಪಾಡಿ,

contributor

Similar News