ಬಿಜೆಪಿ ಬಗ್ಗೆ ಮೌನವಾಗಿರುವ ಚು.ಆಯೋಗ ಜನರನ್ನು ನಿರಾಶೆಗೊಳಿಸಿದೆ: ಚಿದಂಬರಂ

Update: 2019-04-28 15:46 GMT

ಹೊಸದಿಲ್ಲಿ,ಎ.28: ಚುನಾವಣಾ ಆಯೋಗವು ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆಯ ಅತಿರೇಕಗಳಿಗೆ,ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳಿಗೆ ಮತ್ತು ಬಿಜೆಪಿಯು ಮಾಡುತ್ತಿರುವ ಭಾರೀ ವೆಚ್ಚಗಳ ಬಗ್ಗೆ ಮೂಕಪ್ರೇಕ್ಷಕವಾಗಿದೆ ಎಂದು ರವಿವಾರ ಆರೋಪಿಸಿದ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು,ಅದು ಭಾರತದ ಜನರನ್ನು ತೀರ ನಿರಾಶೆಗೊಳಿಸಿದೆ ಎಂದು ಹೇಳಿದರು.

ಬಿಜೆಪಿಯು ರಾಷ್ಟ್ರವಾದವನ್ನು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿರುವುದು ಎನ್‌ ಡಿಎ ಸರಕಾರದ ವೈಫಲ್ಯಗಳನ್ನು ಮುಚ್ಚಿಡುವ ತಂತ್ರವಾಗಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು.

ಲೋಕಸಭಾ ಚುನಾವಣೆಗಳ ಬಳಿಕ ಯುಪಿಎ ಅಧಿಕಾರಕ್ಕೆ ಬರುವ ಸಾಧ್ಯತೆ,ಕೆಲವು ಪ್ರತಿಪಕ್ಷ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ,ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಇತ್ತೀಚಿನ ದಾಳಿಗಳು,ಜೊತೆಗೆ ಇತರ ವಿಷಯಗಳ ಕುರಿತು ಪ್ರಶ್ನೆಗಳಿಗೆ ಸಂದರ್ಶನದಲ್ಲಿ ಚಿದಂಬರಂ ಉತ್ತರಿಸಿದರು.

ಪ್ರತಿಯೊಬ್ಬ ಪ್ರತಿಪಕ್ಷ ಅಭ್ಯರ್ಥಿಗಳ ಲೆಕ್ಕಗಳನ್ನು,ಧ್ವಜಖರೀದಿಯಂತಹ ಸಣ್ಣ ಲೆಕ್ಕವನ್ನೂ ಚುನಾವಣಾ ಆಯೋಗವು ಕೇಳುತ್ತಿದೆ. ಅದು ಸಾಂಕೇತಿಕ ವೆಚ್ಚವನ್ನೂ ಅಭ್ಯರ್ಥಿಯ ವೆಚ್ಚದ ಲೆಕ್ಕಕ್ಕೆ ಸೇರಿಸುತ್ತಿದೆ. ಇದೇ ಮಾನದಂಡವನ್ನು ಬಳಸಿದರೆ ಪ್ರತಿಯೊಬ್ಬ ಬಿಜೆಪಿ ಅಭ್ಯರ್ಥಿಯೂ ಚುನಾವಣೆಗೆ ಅನರ್ಹನಾಗುತ್ತಾನೆ ಎಂದರು.

ಬಿಜೆಪಿಯು ರಾಷ್ಟ್ರವಾದವನ್ನು ಚುನಾವಣಾ ಪ್ರಚಾರ ವಿಷಯವನ್ನಾಗಿ ಮಾಡಿಕೊಂಡಿರುವ ಕುರಿತು ಕೇಳಿದಾಗ, ಬಿಜೆಪಿಯು ಅಧಿಕಾರಕ್ಕೆ ಬರುವ ಮುನ್ನ ಭಾರತೀಯರು ರಾಷ್ಟ್ರವಿರೋಧಿಗಳಾಗಿದ್ದರೇ ಎಂದು ಮರುಪ್ರಶ್ನಿಸಿದ ಅವರು,ರಾಷ್ಟ್ರವಾದವು ಅವರ ವೈಫಲ್ಯವನ್ನು ಬಚ್ಚಿಡಲು ಘೋಷಣೆಯಾಗಿದೆ. ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರಪ್ರೇಮಿಯಾಗಿದ್ದಾನೆ. ಯಾವುದೇ ರಾಷ್ಟ್ರಪ್ರೇಮಿಯನ್ನು ರಾಷ್ಟ್ರವಿರೋಧಿ ಎನ್ನುವಂತಿಲ್ಲ. ಯಾವುದೇ ಅರ್ಥವಿಲ್ಲದಿರುವ ರಾಷ್ಟ್ರವಾದದ ಕಲ್ಪನೆಯನ್ನು ಮಾರಾಟ ಮಾಡುವಂತೆ ಬಿಜೆಪಿ ಮಾಧ್ಯಮಗಳ ತಲೆ ಕೆಡಿಸಿದೆ. ಪ್ರತಿ ಭಾರತೀಯನೂ ಐದು ವರ್ಷಗಳ ಹಿಂದಿಗಿಂತ ಹೆಚ್ಚು ಸುಖಿಯಾಗಿದ್ದಾನೆಯೇ ಎನ್ನುವುದು ಏಕೈಕ ಸುಸಂಗತ ಪ್ರಶ್ನೆಯಾಗಿದೆ. ಇಲ್ಲ ಎಂದು ತಾನು ಹೇಳುತ್ತೇನೆ. ಪ್ರತಿಯೊಬ್ಬ ಭಾರತೀಯನೂ ಭೀತಿಯಲ್ಲಿ ಬದುಕುತ್ತಿದ್ದಾನೆ. ಮಹಿಳೆಯರು,ದಲಿತರು,ಪರಿಶಿಷ್ಟ ಪಂಗಡಗಳು,ಪತ್ರಕರ್ತರು,ಶಿಕ್ಷಣತಜ್ಞರು,ಹೀಗೆ ಎಲ್ಲರೂ ಭೀತಿಯಿಂದಲೇ ಬದುಕುತ್ತಿದ್ದಾರೆ ಎಂದರು.

ಬಿಜೆಪಿ ಅಧಿಕಾರಕ್ಕೆ ಮರಳುವುದಿಲ್ಲ ಎಂದು ತನಗೆ ಸಂಪೂರ್ಣ ವಿಶ್ವಾಸವಿದೆ ಎಂದ ಚಿದಂಬರಂ,ಚುನಾವಣೆಗಳ ಬಳಿಕ ಎಸ್‌ಪಿ,ಬಿಎಸ್‌ಪಿ ಮತ್ತು ತೃಣಮೂಲದಂತಹ ಎಲ್ಲ ಬಿಜೆಪಿಯೇತರ ಪಕ್ಷಗಳು ಸ್ಥಿರ ಸರಕಾರದ ರಚನೆಗೆ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸುತ್ತವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News