ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟಿಗ ಧೋನಿ

Update: 2019-04-28 17:15 GMT

ಹೊಸದಿಲ್ಲಿ, ಎ. 28: ರಿಯಲ್ ಎಸ್ಟೇಟ್ ಸಮೂಹ ಆಮ್ರಪಾಲಿ ಯೋಜನೆಯಲ್ಲಿನ ಪೆಂಟ್‌ಹೌಸ್ ಅನ್ನು ವಶಕ್ಕೆ ನೀಡುವಂತೆ ಹಾಗೂ ಆಮ್ರಪಾಲಿ ಸಮೂಹದ ಸಾಲದಾತರ ಪಟ್ಟಿಯಲ್ಲಿ ತನ್ನ ಹೆಸರನ್ನು ಕೂಡ ಸೇರಿಸುವಂತೆ ಕೋರಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ರಾಂಚಿಯಲ್ಲಿರುವ ಆಮ್ರಪಾಲಿ ಸಫಾರಿಯಲ್ಲಿ ತಾನು ಪೆಂಟ್‌ಹೌಸ್ ಕಾದಿರಿಸಿದ್ದೆ ಎಂದು ಧೋನಿ ತನ್ನ ಮನವಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದೇ ಸಂದರ್ಭ ಆಮ್ರಪಾಲಿ ಸಮೂಹದ ಆಡಳಿತ ಮಂಡಳಿ ಕೂಡ ಸಮೂಹದ ‘ನಿರ್ಮಾಣ’ದ ಪ್ರಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು ಎಂದು ಅವರು ತಿಳಿಸಿದ್ದಾರೆ. ತನ್ನ ನಿರ್ಮಾಣದ ಪ್ರಚಾರಕ್ಕೆ ಭರವಸೆ ನೀಡಲಾದ ಮೊತ್ತದ ಬಾಕಿ ಪಾವತಿಸದೆ ಹಾಗೂ ಪೆಂಟ್‌ಹೌಸ್‌ನ ಸ್ವಾಧೀನ ನೀಡದೆ ಆಮ್ರಪಾಲಿ ಸಮೂಹ ತನಗೆ ವಂಚಿಸಿದೆ ಎಂದು ಧೋನಿ ಹೇಳಿದ್ದಾರೆ.

ಆಮ್ರಪಾಲಿ ಸಮೂಹಕ್ಕೆ ಬ್ರಾಂಡ್ ಅಂಬಾಸಡರ್ ಆಗಿ ಕಾರ್ಯ ನಿರ್ವಹಿಸಿರುವುದಕ್ಕೆ ಬಾಕಿ ಇರುವ 40 ಕೋಟಿ ರೂಪಾಯಿಯನ್ನು ಪಾವತಿಸುವಂತೆ ಆಮ್ರಪಾಲಿ ಸಮೂಹಕ್ಕೆ ನಿರ್ದೇಶನ ನೀಡುವಂತೆ ಕೋರಿ ಧೋನಿ ಕಳೆದ ತಿಂಗಳು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. 2009-2016ರ ವರೆಗೆ ರಿಯಲ್ ಎಸ್ಟೇಟ್ ಕಂಪೆನಿಯ ಬ್ರಾಂಡ್ ಅಂಬಾಸಡರ್ ಆಗಲು ಧೋನಿ ಒಪ್ಪಿದ್ದರು. ನಿರ್ಮಾಣ ಪ್ರಚಾರದ ಹಲವು ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಆದರೆ, ಆಮ್ರಪಾಲಿ ಸಮೂಹ ಆರ್ಥಿಕ ಸಮಸ್ಯೆಯಲ್ಲಿ ನಡೆಯುತ್ತಿತ್ತು. ತಮಗೆ ಸಂಬಂಧಿಸಿ ಸೊತ್ತುಗಳಿಗೆ ಈಗಾಗಲೆ ಪಾವತಿ ಮಾಡಿದ 46,000 ಖರೀದಿಗಾರರು ಸೊತ್ತನ್ನು ಹಸ್ತಾಂತರಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತೆ ಕೋರಿದ್ದರು. ಆಮ್ರಪಾಲಿ ಸಮೂಹದೊಂದಿಗೆ ಧೋನಿ ಅವರು ಹಲವು ಒಪ್ಪಂದಗಳನ್ನು ಮಾಡಿಕೊಂಡಿದ್ದರು. ಅವರ ಪತ್ನಿ ಸಾಕ್ಷಿ ಸಮೂಹದ ಚಾರಿಟೆಬಲ್ ವಿಂಗ್‌ನೊಂದಿಗೆ ಸಂಬಂಧ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News