“ಸರಕಾರ ಮಧ್ಯೆ ಪ್ರವೇಶಿಸದಿದ್ದರೆ, ಇನ್ನಷ್ಟು ಜೆಟ್ ಏರ್‌ವೇಸ್ ಉದ್ಯೋಗಿಗಳು ಆತ್ಮಹತ್ಯೆ”

Update: 2019-04-28 17:38 GMT

ಮುಂಬೈ, ಎ. 28: ಭರವಸೆ ಕಾಣದ ಹಿನ್ನೆಲೆಯಲ್ಲಿ ಜೆಟ್ ಏರ್‌ವೇಸ್ ಉದ್ಯೋಗಿ ಶೈಲೇಶ್ ಕುಮಾರ್ ಸಿಂಗ್ ಆತ್ಮಹತ್ಯೆಗೆ ಶರಣಾದರು. ಜೆಟ್ ಏರ್‌ವೇಸ್ ಬಿಕ್ಕಟ್ಟಿನ ಮಧ್ಯೆ ಕೇಂದ್ರ ಸರಕಾರ ಪ್ರವೇಶಿಸದೇ ಇದ್ದರೆ ಇನ್ನಷ್ಟು ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ನ್ಯಾಶನಲ್ ಏವಿಯೇಟರ್ ಗಿಲ್ಡ್‌ನ ಉಪಾಧ್ಯಕ್ಷ ಅಸಿಮ್ ವಲಿಯಾನಿ ರವಿವಾರ ಹೇಳಿದ್ದಾರೆ.

ಶೈಲೇಶ್ ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡರು. ಕಿಂಗ್‌ಫಿಶರ್ ಏರ್‌ಲೈನ್ಸ್ ಬಿಕ್ಕಟ್ಟು ಆದಂತೆ ಇದು ಆಗಲು ನಾವು ಬಯಸುವುದಿಲ್ಲ. ಜೆಟ್ ಏರ್‌ವೇಸ್‌ನ 22,000 ಉದ್ಯೋಗಿಗಳಿಗೆ ಸರಕಾರ ಏನನ್ನೂ ಮಾಡದಿರುವುದರಿಂದ ನಮಗೆ ತೀವ್ರ ನಿರಾಶೆಯಾಗಿದೆ. ಆತ್ಮಹತ್ಯೆಯ ಸಂಖ್ಯೆ ಇನ್ನಷ್ಟು ಏರಿಕೆ ಆಗಬಹುದು ಎಂದು ನಮಗೆ ಭೀತಿ ಉಂಟಾಗಿದೆ. ಅವರ (ಶೈಲೇಶ್ ಸಿಂಗ್) ಪುತ್ರ ಕೂಡ ಜೆಟ್ ಏರ್‌ವೇಸ್‌ನ ಉದ್ಯೋಗಿ. ಶೈಲೇಶ್ ಸಿಂಗ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಲ್ಲಿ ಹಣವಿರಲಿಲ್ಲ. ಆದರೆ, ಅವರು ಆ ದಾರಿಯಲ್ಲಿ ಹೋಗಬಾರದಿತ್ತು ಎಂದು ವಲಿಯಾನಿ ತಿಳಿಸಿದ್ದಾರೆ.

ಜೆಟ್ ಏರ್‌ವೇಸ್‌ನ ಹಿರಿಯ ಟೆಕ್ನೀಶಿಯನ್ ಆಗಿದ್ದ ಶೈಲೇಶ್ ಕುಮಾರ್ ಸಿಂಗ್ ಹೊಟ್ಟೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಏರ್‌ಲೈನ್ಸ್‌ನ ಬಿಕ್ಕಟ್ಟಿನಿಂದ ವೇತನ ಸಿಗದೆ ಅವರು ಎಪ್ರಿಲ್ 26ರಂದು ಮುಂಬೈಯ ಕಟ್ಟಡವೊಂದರ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜೆಟ್ ಏರ್‌ವೇಸ್‌ನ ಉದ್ಯೋಗಿಗಳಿಗೆ ಅವರ ಹಣೆಬರೆಹದ ಬಗ್ಗೆ ಕೂಡ ಸುಳಿವಿಲ್ಲ. ದಿನಗಳು ಕಳೆದಂತೆ ಅವರು ಭರವಸೆ ಕಳೆದುಕೊಳ್ಳುತ್ತಿದ್ದಾರೆ ಜೆಟ್ ಏರ್‌ವೇಸ್ ಅನ್ನು ಆವರಿಸಿಕೊಂಡಿರುವ ಬಿಕ್ಕಟ್ಟಿಗೆ ಪರಿಹಾರ ಹುಡುಕಲು ಎಲ್ಲ ರಾಜಕೀಯ ಪಕ್ಷಗಳು ಸಂಘಟಿತರಾಗಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News