ಪ್ರಿಯಾಂಕಾ ಗಾಂಧಿಯ ಸರಳತೆ ನನ್ನ ಮೇಲೆ ಪ್ರಭಾವ ಬೀರಿದೆ: ವಿಜೇಂದರ್ ಸಿಂಗ್

Update: 2019-04-29 14:57 GMT

ಹೊಸದಿಲ್ಲಿ, ಎ. 29: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೋಲುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸರಳತೆ ನನ್ನನ್ನು ಪ್ರಭಾವಿಸಿದೆ ಎಂದು ರಾಜಕಾರಣಿಯಾಗಿ ಪರಿವರ್ತನೆ ಹೊಂದಿರುವ ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.

ದಿಲ್ಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿಂಗ್, ಬಿಜೆಪಿಯ ರಮೇಶ್ ಬಿಧುರಿ ಉತ್ತಮ ವ್ಯಕ್ತಿ ಅಲ್ಲ. ಆಪ್‌ನ ರಾಘವ ಛಂಧಾ ಬಚ್ಚಾ ಎಂದು ಹೇಳಿದ್ದಾರೆ. “ನಾನು ಪ್ರಿಯಾಂಕಾಜಿ ಹಾಗೂ ಅವರ ಸರಳತೆಯನ್ನು ಇಷ್ಟಪಡುತ್ತೇನೆ. ಅವರು ಮಾತನಾಡುವ ರೀತಿ ಇಂದಿರಾ ಗಾಂಧಿ ಅವರನ್ನು ನೆನಪಿಸುತ್ತದೆ. ಅವರು ನನ್ನ ಮೇಲೆ ಪ್ರಭಾವ ಬೀರಿದ್ದಾರೆ” ಎಂದು ಅವರು ಹೇಳಿದ್ದಾರೆ.

 “ಅಭ್ಯರ್ಥಿಗಳೊಂದಿಗೆ ಯಾವುದೇ ವಿಶೇಷ ಸ್ಪರ್ಧೆ ಇಲ್ಲ. ನನ್ನ ವಿಚಾರಗಳನ್ನು ಜನರ ಮುಂದಿಡುತ್ತೇನೆ. ಆದರೆ, ಸುಳ್ಳು ಹೇಳಲಾರೆ. ರೈತ ಕುಟುಂಬಕ್ಕೆ ಸೇರಿದ ಬಸ್ ಚಾಲಕನ ಮಗ ನಾನು. ನಾನು ಶೂನ್ಯದಿಂದ ಆರಂಭಿಸಿದೆ. ಇತ್ತೀಚೆಗೆ ವಸಂತ್ ಕುಂಜದಲ್ಲಿ ವಾಸಿಸಲು ಆರಂಭಿಸಿದೆ” ಎಂದು ಅವರು ಹೇಳಿದ್ದಾರೆ. ಪ್ರತಿಸ್ಪರ್ಧಿಗಳ ಬಗ್ಗೆ ಮಾತನಾಡಿದ ಸಿಂಗ್, “ಜನರು ಈಗಿನ ಸಂಸದ (ಬಿಧುರಿ) ರು ಕೆಟ್ಟ ವ್ಯಕ್ತಿ. ಆದುದರಿಂದ ಅವರನ್ನು ಯಾರೂ ಇಷ್ಟಪಡುತ್ತಿಲ್ಲ. ಆಪ್‌ನ ರಾಘವ್ ಛಾಂಧ್ ಬಗ್ಗೆ ನನಗೇನೂ ತಿಳಿದಿಲ್ಲ. ಜನರು ಕೇಜ್ರಿವಾಲ್ ಹಾಗೂ ಅವರ ಹುಸಿ ಭರವಸೆಗಳಿಂದ ವಿಷಣ್ಣರಾಗಿದ್ದಾರೆ. ಅವರು ಬಡ ಜನರಿಗಾಗಿ ಸಾಕಷ್ಟು ಕೆಲಸ ಮಾಡಬಹುದಿತ್ತು. ಆದರೆ, ಅವರು ಎ.ಸಿ. ರೂಮ್‌ನಲ್ಲಿ ಕುಳಿತು ಧರಣಿ ನಡೆಸಿದರು” ಎಂದರು.

ಶಾಲಾ ಶಿಕ್ಷಣವನ್ನು ಅತ್ಯಾಧುನಿಕಗೊಳಿಸಲಾಗುವುದು ಹಾಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಆಪ್ ಭರವಸೆ ನೀಡಿತ್ತು. ಆದರೆ, ವಿದ್ಯಾರ್ಥಿಗಳಿಗೆ 8ನೇ ತರಗತಿ ನಂತರ ಹೋಗಲು ಶಾಲೆಯೇ ಇಲ್ಲ. ನೀರಿನ ಟ್ಯಾಂಕರ್‌ಗಳ ಬೆಲೆ ಎಷ್ಟೆಂದು ಎಲ್ಲರಿಗೂ ಗೊತ್ತು ಎಂದು ವಿಜೇಂದರ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News